

ವಿಷಪೂರಿತ ಮಾಲಿನ್ಯ ದೆಹಲಿ ಜನರ ಉಸಿರುಗಟ್ಟಿಸುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕೇಂದ್ರ ಹಾಗೂ ಬೇರೆ ರಾಜ್ಯಗಳ ನೆರವು ಕೇಳ್ತಿದೆ. ಇದೇ ವಿಚಾರ ರಾಜಕಾರಣಿಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣಕ್ಕೆ ಜನರು ಮುಂದೆ ಬರಬೇಕೆಂದು ಸಲಹೆ ನೀಡಿದ್ದಾರೆ. ಇನ್ಸ್ಟ್ರಾಗ್ರಾಮ್ ಹಾಗೂ ಟ್ವೀಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ಜನರಿಗೆ ಮನವಿ ಮಾಡಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕೆ ಖಾಸಗಿ ವಾಹನ ಬಳಸುವ ಬದಲು ಸಾರ್ವಜನಿಕ ವಾಹನ ಬಳಸಿ ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಮಾಲಿನ್ಯ ಯಾವ ರೀತಿಯಲ್ಲಿದೆ ಎಂಬುದು ನಿಮಗೆಲ್ಲ ಗೊತ್ತು. ನಾನು ಈ ಬಗ್ಗೆ ಎಲ್ಲರ ಗಮನ ಸೆಳೆಯಲು ಬಯಸ್ತೇನೆ. ಪ್ರತಿಯೊಬ್ಬರೂ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದ್ರೆ ವಾಸ್ತವದಲ್ಲಿ ಈ ಸಮಸ್ಯೆಯಿಂದ ಹೊರ ಬರಲು ನಾವು ಏನು ಮಾಡ್ತಿದ್ದೇವೆ ಎಂಬ ಬಗ್ಗೆ ಯೋಚನೆ ಮಾಡಿ. ಮಾಲಿನ್ಯದ ಪಂದ್ಯ ಗೆಲ್ಲಬೇಕಾದ್ರೆ ಎಲ್ಲರೂ ಒಂದಾಗಿ ಆಡಬೇಕು. ಯಾಕೆಂದ್ರೆ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದ್ರಲ್ಲೂ ದೆಹಲಿ ನಿವಾಸಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಸಾಧ್ಯವಾದಷ್ಟು ಖಾಸಗಿ ವಾಹನ, ಕಾರಿನ ಬಳಕೆಯನ್ನು ಕಡಿಮೆ ಮಾಡಿ. ಹೆಚ್ಚೆಚ್ಚು ಬಸ್, ಮೆಟ್ರೋ, ಕ್ಯಾಬ್ ನಲ್ಲಿ ಸಂಚರಿಸಿ. ವಾರದಲ್ಲಿ ಒಮ್ಮೆ ನೀವು ಹೀಗೆ ಮಾಡಿದ್ರೂ ದೊಡ್ಡ ವ್ಯತ್ಯಾಸವುಂಟಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.