Quantcast
Channel: Kannada Dunia | Kannada News | Karnataka News | India News
Viewing all 122063 articles
Browse latest View live

ಪಾಳು ಕಟ್ಟಡದಲ್ಲಿ ಪೋಸ್ಟ್ ಗಳನ್ನು ಸುರಿಯುತ್ತಿದ್ದ ಭೂಪ

$
0
0

ಪೋಸ್ಟ್ ಮಾಸ್ಟರ್ ಒಬ್ಬ ಹಳ್ಳಿಯೊಂದರಲ್ಲಿ 2004 ರಿಂದ ತನ್ನ ಅಂಚೆ ಕಚೇರಿಗೆ ಬಂದ ಅಂಚೆ ಪತ್ರಗಳನ್ನು ಜನರಿಗೆ ಸರಿಯಾಗಿ ವಿತರಿಸದೇ ವಂಚಿಸಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಒಡಿಶಾದ ಭದ್ರಾಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ರೀತಿ ಘಟನೆ ನಡೆದಿದ್ದು, ಆ ಪೋಸ್ಟ್ ಮಾಸ್ಟರ್ ತಾನು ವಿತರಿಸಬೇಕಾದ ಪತ್ರಗಳನ್ನು ಹಳೆಯ ಕಟ್ಟಡವೊಂದರಲ್ಲಿ ಸುರಿಯುತ್ತಿದ್ದ. ಶಾಲಾ ಮಕ್ಕಳ ಗಮನಕ್ಕೆ ಇದು ಗಮನಕ್ಕೆ ಬಂದಿದ್ದು, ಸರಿ ಸುಮಾರು ಬಟವಾಡೆಯಾಗದ 6 ಸಾವಿರ ಪತ್ರಗಳು ಸಿಕ್ಕಿವೆ.

1500 ಪತ್ರಗಳು ಸುರಕ್ಷಿತವಾಗಿದ್ದು, ಉಳಿದವು ನಾಶವಾಗಿದೆ. 2004 ರಿಂದ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸಿ ಅಂಚೆ ಪತ್ರಗಳನ್ನು ಸರಿಯಾಗಿ ವಿತರಿಸಿಲ್ಲವೆಂದು ಆತ ಒಪ್ಪಿಕೊಂಡಿದ್ದು, ಇದೀಗ ಇಲಾಖೆ ಆತನ ವಿರುದ್ಧ ಉಗ್ರ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಆತನನ್ನು ಮೊದಲು ಸೇವೆಯಿಂದ ಅಮಾನತುಗೊಳಿಸಿ ನಂತರ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸುವ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವರುಣನ ಆರ್ಭಟಕ್ಕೆ ಹೈರಾಣಾದ ಜನ

$
0
0

ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕರಾವಳಿ, ಕೊಡಗು ಹಾಗೂ ಮಲೆನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ಮಳೆ ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿರುವ ಪರಿಣಾಮ ಜಲಾಶಯಗಳಿಂದ ನೀರನ್ನು ಹೊರ ಬಿಡಲಾಗುತ್ತಿದ್ದು, ಇದರಿಂದಾಗಿ ನದಿಪಾತ್ರದ ಹೊಲಗದ್ದೆಗಳಲ್ಲಿ ನೀರು ಹರಿಯುತ್ತಿದೆ. ರೈತರು ಬೆಳೆ ನಷ್ಟವನ್ನು ಅನುಭವಿಸಿದ್ದು, ವರುಣನ ಅವಾಂತರಕ್ಕೆ ದಿಕ್ಕು ತೋಚದಂತಾಗಿದ್ದಾರೆ.

ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸಲು ಇಲ್ಲಿದೆ ದಾರಿ

$
0
0

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ದಿನೇ ದಿನೇ ಇನ್ನಷ್ಟು ಆತಂಕಕಾರಿಯಾಗಿ ಬದಲಾಗ್ತಿದೆ. ಬುಧವಾರದ ಅಂತ್ಯಕ್ಕೆ ಪ್ರವಾಹ ಮತ್ತು ಮಳೆಯಿಂದಾಗಿ ಮಡಿದವರ ಸಂಖ್ಯೆ 60ಕ್ಕೆ ಏರಿದೆ. ಕೇರಳದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸ್ವಯಂ ಸೇವಕ ಸಂಘಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿವೆ.

ಈಗ ಕೇರಳ ಸಿಎಂ ಪಿಣರಾಯ್ ವಿಜಯನ್ ದೇಶದ ನಾಗರಿಕರಿಂದಲೂ ಪ್ರವಾಹ ಪರಿಹಾರ ನಿಧಿಯನ್ನು ಸಂಗ್ರಹಿಸೋದಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿಯೇ ಕೇರಳ ಸರ್ಕಾರ ಬ್ಯಾಂಕ್ನಲ್ಲಿ ಪ್ರತ್ಯೇಕ ಖಾತೆಯನ್ನು ತೆರೆದು ದಾನಿಗಳು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವಂತೆ ವಿನಂತಿ ಮಾಡಿದ್ದಾರೆ.

ಈಗಾಗ್ಲೇ ಕರ್ನಾಟಕ, ಸರ್ಕಾರ ಕೇರಳ ಪ್ರವಾಹ ನಿಧಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಕೇಂದ್ರ ಸರ್ಕಾರ ಕೂಡ ಕೇರಳಕ್ಕೆ ಸಹಾಯ ಹಸ್ತ ಚಾಚಿದೆ. ಈಗ ನಾಗರಿಕರು ಕೂಡ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ತಮ್ಮ ಕೈಲಾದ ಸಹಾಯ ಮಾಡಬಹುದಾಗಿದೆ.

ಚೆಕ್, ಡಿಡಿ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಕಳುಹಿಸಬಹುದಾಗಿದೆ. ಇದಕ್ಕಾಗಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ. ಸಿಎಂಆರ್ಡಿಎಫ್ ಹೆಸರಿನ ಖಾತೆಯ ಸಂಖ್ಯೆ 67319948232 ಆಗಿದೆ. ತಿರುವನಂತಪುರಂ ಸಿಟಿ ಬ್ರ್ಯಾಂಚ್ನ ಖಾತೆಗೆ ಹಣ ವರ್ಗಾವಣೆ ಮಾಡೋದಕ್ಕೆ ಎಸ್ಬಿಐಎನ್ 0070028 ಐಎಫ್ಎಸ್ಸಿ ಕೋಡ್ ಬಳಸಬೇಕು. ಈ ಬ್ಯಾಂಕ್ ಖಾತೆಯ ಪ್ಯಾನ್ ಸಂಖ್ಯೆ ಎಎಎಜಿಡಿ 584ಎಮ್ ಆಗಿದೆ.

ಧನ ಸಹಾಯದ ಹೊರತಾಗಿ ದಿನನಿತ್ಯದ ವಸ್ತುಗಳನ್ನು ಕೂಡ ದಾನಿಗಳು ನೀಡಬಹುದಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಹ್ಯಾಷ್ ಟ್ಯಾಗ್ ಚಳವಳಿ ಕೂಡ ಆರಂಭವಾಗಿದೆ. ಅಲ್ಲದೇ ಕೇರಳದ ಜಿಲ್ಲಾ ಸಹಾಯಾಧಿಕಾರಿಗಳ ಮೊಬೈಲ್ ನಂಬರ್ 9809700000, 9895320567,9544811555ಗೆ ಕೂಡ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಬರ್ತಡೇಗೆ ಬಂದವ ಬರ್ಬರವಾಗಿ ಹತ್ಯೆಯಾದ

$
0
0

ಬೆಂಗಳೂರು: ಸ್ನೇಹಿತನ ಮಗನ ಹುಟ್ಟುಹಬ್ಬಕ್ಕೆಂದು ಹೋದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮರಿಯಪ್ಪನಪಾಳ್ಯದಲ್ಲಿ ನಡೆದಿದೆ.

ಜೆ ಪಿ ನಗರದ ನಿವಾಸಿ ಪ್ರತಾಪ್ (28) ಹತ್ಯೆಯಾಗಿರುವ ಯುವಕ. ಬುಧವಾರ ಸಂಜೆ ಸ್ನೇಹಿತ ಅರುಣ್ ಮಗನ ಹುಟ್ಟುಹಬ್ಬಕ್ಕೆ ಈತ ತೆರಳಿದ್ದ. ಮರಿಯಪ್ಪನಪಾಳ್ಯದ 3 ನೇ ಕ್ರಾಸ್ ನಲ್ಲಿರುವ ಅರುಣ್ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಬಳಿಕ ಮನೆಯಿಂದ ಹೊರಗೆ ಬಂದ ಪ್ರತಾಪ್ ಮೇಲೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿಮಾನದಲ್ಲಿ ವೈನ್ ಸಿಪ್ ಮಾಡಿ ಜೈಲು ಪಾಲಾದ ವೈದ್ಯೆ

$
0
0

ಕೆಂಟ್: ವಿಮಾನದಲ್ಲಿ ವೈನ್ ಸೇವಿಸಿದ್ದಕ್ಕೆ ದಂತ ವೈದೆಯೊಬ್ಬಳು ತನ್ನ ನಾಲ್ಕು ವರ್ಷದ ಮಗಳೊಂದಿಗೆ ಮೂರು ದಿನ ದುಬೈನಲ್ಲಿ ಜೈಲು ವಾಸ ಅನುಭವಿಸಿದ ಪ್ರಸಂಗ ನಡೆದಿದೆ.
44 ವಯಸ್ಸಿನ ವೈದ್ಯೆ ಲಂಡನ್ನಿಂದ ದುಬೈಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ವೈನ್ ಸಿಪ್ ಮಾಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಇದೀಗ ಬಿಡುಗಡೆ ಹೊಂದಿದ್ದಾರೆ.

ಇದೇ ವೇಳೆ ಜೈಲಿನಲ್ಲಿ ತಮಗಾದ ಅನುಭವವನ್ನು ಹೊರಹಾಕಿದ್ದು, ಅಲ್ಲಿ ದೌರ್ಜನ್ಯ ನಡೆಸಲಾಯಿತು ಎಂದು ಆಕ್ಷೇಪ ಎತ್ತಿದ್ದಾರೆ. ಮಗಳ ಜತೆ ನಾನು ಪ್ರೀತಿಸಿದ ದೇಶಕ್ಕೆ ರಜಾ ದಿನ ಕಳೆಯಲು ಹೋಗಿದ್ದೆ. ಆದರೆ, ಜೈಲಿನಲ್ಲಿ ಹಿಂಸೆ ಅನುಭವಿಸಬೇಕಾಯಿತು ಎಂದವರು ಹೇಳಿಕೊಂಡಿದ್ದಾರೆ.

ವೈನ್ ಇದ್ದ ಕಾರಣಕ್ಕೆ ದುಬೈಗೆ ಬಂದಿಳಿಯುತ್ತಿದ್ದಂತೆ ಆಕೆಯನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆದಿತ್ತು. ಬಳಿಕ ಆಕೆಯನ್ನು ಜೈಲಿಗೆ ತಳ್ಳಲಾಗಿತ್ತು. ಸಧ್ಯ ಆಕೆ ತನ್ನ ತವರು ಕೆಂಟ್ಗೆ ವಾಪಸಾಗಿದ್ದು, ಈ ವಿಷಯವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸಲು ಪ್ರಯತ್ನ ನಡೆಸಿದ್ದಾರೆ.

ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ ಗೃಹ ಪ್ರವೇಶ ಮಾಡಿದ ದಂಪತಿ

$
0
0

ಹುಬ್ಬಳ್ಳಿ: ನೂತನ ಮನೆಯನ್ನು ಕಟ್ಟಿದ ದಂಪತಿಗಳಿಬ್ಬರು ರಾಷ್ಟ್ರಧ್ವಜವನ್ನು ಏರಿಸಿ, ರಾಷ್ಟ್ರಗೀತೆಯನ್ನು ಹಾಡುವ ಮೂಲಕ ವಿಶೇಷವಾಗಿ ಗೃಹ ಪ್ರವೇಶ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಲ್ಲಪ್ಪ ತಡಸದ್ ದಂಪತಿ ಇಲ್ಲಿನ ಸಾಯಿನಗರದಲ್ಲಿ ಮನೆ ನಿರ್ಮಿಸಿದ್ದು, ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮೂಲಕ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಕುಂಬಳಕಾಯಿ, ಹೋಮ-ಹವನಗಳಿಗೆ ಮಾನ್ಯತೆ ನೀಡದೇ ತ್ರಿವರ್ಣ ಧ್ವಜ ಹಾರಿಸಿ, ದೇಶಪ್ರೇಮ ಮೆರೆದು ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.

ಮಂತ್ರ-ತಂತ್ರ, ಹೋಮ ಹವನದ ಬದಲಾಗಿ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿರೋದೇ ಈ ಮನೆಗೆ ಮಂಗಳಕರ ಅಂತಾರೆ ತಡಸದ್ ದಂಪತಿಗಳು.

ಕುಟುಂಬದೊಂದಿಗೆ ಸಚಿವೆ ಜಯಮಾಲ ಕೊಲ್ಲೂರು ಭೇಟಿ

$
0
0

ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಕುಟುಂಬ ಸದಸ್ಯರೊಂದಿಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ಜಯಮಾಲಾ, ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕೆ ದರ್ಶನ ಪಡೆದರಲ್ಲದೇ ಪೂಜೆ ಸಲ್ಲಿಸಿದ್ದಾರೆ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಗೆಂದು ಜಯಮಾಲಾರವರು ಉಡುಪಿಗೆ ಭೇಟಿ ನೀಡಿದ್ದು, ಇಂದು ಕೊಲ್ಲೂರಿಗೆ ಭೇಟಿ ನೀಡಿದರು.

ದೆಹಲಿಯತ್ತ ಧಾವಿಸುತ್ತಿರುವ ರಾಜಕೀಯ ನಾಯಕರು

$
0
0

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿರುವ ಸುದ್ದಿ ಹೊರಬೀಳುತ್ತಿದ್ದಂತೆ ದೇಶದ ಪ್ರಮುಖ ರಾಜಕೀಯ ನಾಯಕರು ನವದೆಹಲಿಯತ್ತ ಧಾವಿಸುತ್ತಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿಯವರಿಗೆ ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಕೆಲ ದಿನಗಳ ಹಿಂದೆ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು.

ಆಗಸ್ಟ್ 15ರಂದು ವಾಜಪೇಯವರ ಅನಾರೋಗ್ಯ ಉಲ್ಬಣಗೊಂಡ ಕಾರಣ, ಪ್ರಧಾನಿ ನರೇಂದ್ರ ಮೋದಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇಂದು ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರು ದೆಹಲಿಗೆ ಆಗಮಿಸುತ್ತಿದ್ದಾರೆ.


ಪ್ಯಾರಿಸ್ ನಲ್ಲಿ ಆರಂಭವಾಗಿದೆ ಕಾಲು ದಾರಿ ಮೂತ್ರಾಲಯ

$
0
0

ಪ್ಯಾರಿಸ್: ಸಾರ್ವಜನಿಕ ಮೂತ್ರಾಲಯ ಜಾಗತಿಕ ಸಮಸ್ಯೆ. ಭಾರತ ಸೇರಿ ಮುಂದುವರೆದ ಅನೇಕ ದೇಶಗಳಲ್ಲೂ ಸಹ ಸಾರ್ವಜನಿಕ ಪ್ರದೇಶದಲ್ಲಿ ಪುರುಷರು ಮೂತ್ರ ಮಾಡುವುದು ಸಾಮಾನ್ಯ.

ಇದಕ್ಕೊಂದು ಪರಿಹಾರ ಹುಡುಕಿರುವ ಪ್ಯಾರಿಸ್, ಅಸಂಪ್ರದಾಯಿಕವಾದ ವಿಧಾನ ಕಂಡುಕೊಂಡಿದ್ದು ಕಾಲುದಾರಿ ಮೂತ್ರಾಲಯ ಪದ್ಧತಿ ಅನುಷ್ಠಾನಗೊಳಿಸಲಾರಂಭಿಸಿದೆ.

ನಗರ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಕೆಂಪು ಬಣ್ಣದ ಪೆಟ್ಟಿಗೆಯನ್ನು ಇಡಲಾಗುತ್ತಿದ್ದು, ಇದರಿಂದ ಎಲ್ಲೆಂದರಲ್ಲಿ ಮೂತ್ರ ಮಾಡುವುದಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ. ಅದು ಮೂತ್ರ ಮಾಡುವ ಸ್ಥಳ ಎಂದು ಗಮನ ಸೆಳೆಯಲು ಪುರುಷರನ್ನು ಹೋಲುವ ಕ್ಯಾರಿಕೇಚರ್ ಚಿನ್ಹೆಯಾಗಿ ಬಳಸಲಾಗುತ್ತಿದೆ.

ಈ ಕ್ರಮಕ್ಕೆ ಪ್ಯಾರೀಸ್ ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಪರೀತ ನಗರೀಕರಣದ ಸಂದರ್ಭದಲ್ಲಿ ಹೊಸ ಪದ್ಧತಿಯ ಅನುಷ್ಠಾನ ಮತ್ತು ಬಳಕೆ ಅನಿವಾರ್ಯ ಮತ್ತು ಪರ್ಯಾಯ ದಾರಿ ಎಂಬುದು ಪ್ಯಾರೀಸ್ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಪ್ರತಿಕ್ರಿಯೆ.

ನಗರ ಪ್ರದೇಶದಲ್ಲಿ ಇಂಥದ್ದು ವ್ಯಾಪಕವಾದರೆ ಮಾಲಿನ್ಯವಾಗುತ್ತದೆ ಎಂದು ಕೆಲವು ಸಾರ್ವಜನಿಕರು ಆಕ್ಷೇಪ ಎತ್ತಿದ್ದಾರೆ. ಆದರೆ, ಪುರುಷರಿಗೆ ಅನೇಕ ಸಂದರ್ಭದಲ್ಲಿ ಮೂತ್ರ ಮಾಡುವ ತುರ್ತು ಸಂದರ್ಭ ಬಂದಾಗ ಕಷ್ಟವಾಗುತ್ತದೆ. ಇಂಥ ಹೊಸ ಕ್ರಮದಿಂದ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ಬಂದಿದೆ.

ಬಿಜೆಪಿ ಮುಖ್ಯಮಂತ್ರಿಗಳಿಗೆ ತುರ್ತಾಗಿ ದೆಹಲಿಗೆ ಬರುವಂತೆ ಬುಲಾವ್

$
0
0

ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತುರ್ತಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಲಾಗಿದೆ.

ಇಂದು ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದ್ದರು. ಇದೀಗ ಆರೋಗ್ಯ ವಿಷಮಗೊಂಡಿರುವ ಹಿನ್ನಲೆಯಲ್ಲಿ ತಮ್ಮ ಹೈದರಾಬಾದ್ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಗೆ ಹಿಂದಿರುಗಿದ್ದಾರೆಂದು ತಿಳಿದು ಬಂದಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿದ್ದು, ಅಲ್ಲಿನ ವೈದ್ಯರ ಜೊತೆ ವಾಜಪೇಯಿಯವರ ಆರೋಗ್ಯ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಏಮ್ಸ್ ಆಸ್ಪತ್ರೆಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಹ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ.

ಭಾರೀ ಮಳೆಗೆ ಕುಸಿದು ಬಿದ್ದ ಮನೆಗೋಡೆ: ತಾಯಿ-ಮಕ್ಕಳ ಸಾವು

$
0
0

ಕಲಬುರಗಿ: ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದು ಮಹಿಳೆ ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿಯ ಆಳಂದ ತಾಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀಬಾಯಿ (30) ಮಕ್ಕಳಾದ ಯಲ್ಲಮ್ಮ(11), ಅಂಬಿಕಾ (10) ಮೃತರು. ಲಕ್ಷ್ಮೀಬಾಯಿ ಅವರ ಪತಿ ಪ್ರಭುಗೆ ಗಂಭೀರ ಗಾಯವಾಗಿದ್ದು, ಆಳಂದ ನಿಂಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರೆದಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಗರ್ಭಿಣಿ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿದ ಯೋಧರು

$
0
0

ರಾಯಪುರ: ದೇಶ ಅಭಿವೃದ್ಧಿ ಹೊಂದಿದೆ ಎಂದು ರಾಜಕಾರಣಿಗಳು ಎಷ್ಟೇ ಹೇಳಿಕೆ ನೀಡಿದರೂ ಇನ್ನೂ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕೂಡ ಇಲ್ಲದಷ್ಟು ಹಿಂದುಳಿದಿವೆ. ಸಾರಿಗೆ ಸಂಪರ್ಕವೂ ಸಾಧ್ಯವಾಗದೇ ಜನತೆ ಪರದಾಡುವ ಸ್ಥಿತಿ ಇದೆ. ಗರ್ಭಿಣಿಯೋರ್ವರನ್ನು ಐಟಿಬಿಪಿ ಪೊಲೀಸರು 5 ಕಿಮೀ ದೂರ ಹೆಗಲ ಮೇಲೆ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ ಘಟನೆ ಛತ್ತೀಸ್‍ಗಢದ ಕೊಂಡಾಗವ್ನ್ ಜಿಲ್ಲೆಯಲ್ಲಿ ನಡೆಸಿದೆ.

ಸಹದಲಿ ಎಂಬ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಅಂಬುಲೆನ್ಸ್ ಬರಲು ಸಾಧ್ಯವಾಗಿಲ್ಲ. ಇದರಿಂದ ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಟಿಬಿಪಿ 41ನೇ ಪಡೆಯ ಯೋಧರು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ.

ಮಾನವೀಯತೆ ಮೇರೆಗೆ ಮಹಿಳೆಗೆ ಸಹಾಯ ಮಾಡಿದ ಯೋಧರು, 5 ಕಿಮೀ ದೂರದ ಪಿಎಚ್‍ಸಿ ಮರ್ದಪಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಐಟಿಬಿಪಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಯೋಧರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಪ್ರಾಣ ಉಳಿಸಿಕೊಳ್ಳಲು ಗುಡ್ಡ ಏರಿರುವವರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ

$
0
0

ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನಿರ್ದೇಶನ ನೀಡಿದ್ದಾರೆ.

ಮಡಿಕೇರಿ ಜಿಲ್ಲೆಯ ಬದಿಗೆರೆಯಲ್ಲಿ ಪ್ರಾಣ ರಕ್ಷಣೆಗಾಗಿ ಗುಡ್ಡ ಹತ್ತಿರುವ 300 ಕ್ಕೂ ಹೆಚ್ಚು ಮಂದಿಯನ್ನು ಕೂಡಲೇ ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ಬದಿಗೆರೆ ಸಮೀಪದ ಹತ್ತಿಹೊಳೆ ತುಂಬಿದ್ದರಿಂದ ಆತಂಕಗೊಂಡಿರುವ ನೂರಾರು ಮಂದಿ ಊರಿನ ಗುಡ್ಡವನ್ನು ಏರಿ ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಆ ಗುಡ್ಡವೂ ಕುಸಿಯುವ ಲಕ್ಷಣ ಕಂಡುಬಂದಿದೆ. ಈ ಬಗ್ಗೆ ವರದಿ ತರಿಸಿಕೊಂಡಿರುವ ಮುಖ್ಯಮಂತ್ರಿಗಳು ಈ ಕೂಡಲೇ ಅಲ್ಲಿಗೆ ಧಾವಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೊಡಗು ಹಾಗೂ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೆರೆ, ನದಿಗಳು ತುಂಬಿ ಆತಂಕದ ಹಂತ ತಲುಪಿದೆ. ಈ ಎಲ್ಲೆಡೆ ಜನ ಹಾಗೂ ಜಾನುವಾರು ರಕ್ಷಣೆಗೆ ಮೊದಲ ಆದ್ಯತೆ ನೀಡಲು ಮುಖ್ಯಮಂತ್ರಿಗಳು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಸೂಚನೆ ನೀಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಮೂರೂ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ಕೂಡಲೇ ಜಿಲ್ಲೆಯಾದ್ಯಂತ ಸಂಚರಿಸಿ ನೊಂದವರಿಗೆ ಭರವಸೆ ತುಂಬುವಂತೆ ಹಾಗೂ ಅಗತ್ಯ ಎಲ್ಲಾ ನೆರವಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವಾಜಪೇಯಿಯವರ ನಿವಾಸದ ಸುತ್ತಮುತ್ತ ಬಿಗಿ ಬಂದೋಬಸ್ತ್

$
0
0

ವಯೋಸಹಜ ಅನಾರೋಗ್ಯದ ಕಾರಣಕ್ಕೆ ನವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಿರುವ ಮಾಹಿತಿ ಹೊರ ಬೀಳುತ್ತಿದ್ದಂತೆಯೇ, ವಾಜಪೇಯಿ ಅವರ ನಿವಾಸದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ.

ಏಮ್ಸ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡುತ್ತಿರುವ ಕಾರಣ ಅಲ್ಲಿಯೂ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಏಮ್ಸ್ ಆಸ್ಪತ್ರೆಯ ಸುತ್ತ ಮುತ್ತ ವಾಹನಗಳ ಸಂಚಾರವನ್ನು ನಿಷೇಧಿಸಿ ದೆಹಲಿ ಟ್ರಾಫಿಕ್ ಪೊಲೀಸರು ಆದೇಶ ಹೊರಡಿಸಿದ್ದಾರೆ. ವಿವಿಐಪಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕಾರಣ ಬಿಗಿ ಭದ್ರತೆ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಪೊಲೀಸರು ಈ ವ್ಯವಸ್ಥೆ ಮಾಡುತ್ತಿದ್ದಾರೆ.

ಮೂಗಿಗೆ ಬೆರಳು ಹಾಕಿ ತೊಳೆಯದೇ ಆಹಾರ ಸೇವಿಸಿದ್ರೆ….

$
0
0
30_07_2016-30fingerinnose

ನಮ್ಮ- ನಿಮ್ಮೆಲ್ಲರ ಪ್ರಕಾರ ಮೂಗಿಗೆ ಬೆರಳು ಹಾಕೋದು ಕೆಟ್ಟ ಹವ್ಯಾಸ. ಸ್ನಾನ ಮಾಡುವಾಗ ಬಿಟ್ರೆ ಮತ್ತ್ಯಾವ ಸಮಯದಲ್ಲೂ ಮೂಗಿಗೆ ಬೆರಳು ಹಾಕಿದ್ರೆ ಮುಂದೆ ಕುಳಿತವರಿಗೆ ಸರಿ ಎನಿಸೋದಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಮೂಗಿಗೆ ಬೆರಳು ಹಾಕೋದು ನಾಚಿಕೆಯ ವಿಚಾರ. ಆದ್ರೆ ಪ್ರೊಫೆಸರ್ ಒಬ್ಬರು ಈ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಹೇಳಿದ್ದಾರೆ.

ಬಯೋಕೆಮಿಸ್ಟ್ರಿ ಪ್ರಾಧ್ಯಾಪಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅದ್ರ ಪ್ರಕಾರ ಮೂಗಿಗೆ ಬೆರಳು ಹಾಕಿ ಕೈ ತೊಳೆಯದೆ ಆಹಾರ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದಂತೆ. ಮೂಗು ಕ್ಲೀನ್ ಮಾಡಿದ ನಂತ್ರ ಬರುವ ಒಣಗಿರುವ ಲೋಳೆ ಹೊಟ್ಟೆಯೊಳಗೆ ಹೋಗುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆಯಂತೆ. ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆಯಂತೆ.


ಏಮ್ಸ್ ಆಸ್ಪತ್ರೆಯಿಂದ ನಿವಾಸ ತಲುಪಿದ ವಾಜಪೇಯಿಯವರ ಪಾರ್ಥಿವ ಶರೀರ

$
0
0

ಇಂದು ಸಂಜೆ 5:05 ಕ್ಕೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಧಿವಶರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪಾರ್ಥಿವ ಶರೀರ ಈಗ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ.

ಗಣ್ಯರು ಹಾಗೂ ಸಾರ್ವಜನಿಕರ ದರ್ಶನಕ್ಕಾಗಿ ವಾಜಪೇಯಿಯವರ ಪಾರ್ಥಿವ ಶರೀರವನ್ನು ಇರಿಸಲು ಇಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ವಾಜಪೇಯಿಯವರ ನಿವಾಸದ ಬಳಿ ಕಾದು ಕುಳಿತಿದ್ದ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ನಾಳೆ ಸಂಜೆ ವಾಜಪೇಯಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಗೌರವಾರ್ಥ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸುವಂತೆ ಸೂಚಿಸಲಾಗಿದೆ.

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

$
0
0

ಮೇಷ ರಾಶಿ

ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ.

ವೃಷಭ ರಾಶಿ

ನಿಮ್ಮ ಮಾತಿನ ಚಮತ್ಕಾರದಿಂದ ಲಾಭವಾಗಲಿದೆ. ಹೊಸ ಸಂಬಂಧಗಳು ಬೆಸೆಯಲಿವೆ. ಶುಭಕಾರ್ಯಕ್ಕೆ ಪ್ರೇರಣೆ ಸಿಗಲಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆದ್ರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ಮಿಥುನ ರಾಶಿ

ಮನಸ್ಸು ಗೊಂದಲಮಯವಾಗಿರುತ್ತದೆ, ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕ ಭಾವುಕತೆ ನಿಮ್ಮನ್ನು ದುರ್ಬಲರನ್ನಾಗಿಸುತ್ತದೆ. ಪ್ರವಾಸ ಮುಂದೂಡುವುದು ಸೂಕ್ತ.

ಕರ್ಕ ರಾಶಿ

ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಸಿಂಹ ರಾಶಿ

ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ಸಮಯ ಕಳೆಯಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಾಗಲಿದೆ. ನಿಮ್ಮ ಪ್ರಭಾವಿ ಮಾತುಗಳಿಂದ ಇತರರ ಗಮನ ಸೆಳೆಯಲಿದ್ದೀರಿ.

ಕನ್ಯಾ ರಾಶಿ

ಇಂದು ಲಾಭದಾಯಕ ದಿನ. ವೈಚಾರಿಕ ಸಮೃದ್ಧಿ ವೃದ್ಧಿಸಲಿದೆ. ಮೃದು ಮಾತುಗಳಿಂದ ಸೌಹಾರ್ದಯುತ ಸಂಬಂಧ ಸೃಷ್ಟಿಯಾಗಲಿದೆ. ಉತ್ತಮ ಭೋಜನ ಪ್ರಾಪ್ತವಾಗಲಿದೆ.

ತುಲಾ ರಾಶಿ

ಸಂಯಮ ಕಳೆದುಕೊಳ್ಳಬೇಡಿ. ಅನೈತಿಕ ಕಾರ್ಯಗಳಲ್ಲಿ ತೊಡಗಬೇಡಿ. ದುರ್ಘಟನೆಯಿಂದ ಬಚಾವ್ ಆಗಿ. ಮೋಜು ಮಸ್ತಿ, ಸುತ್ತಾಟಕ್ಕಾಗಿ ಹೆಚ್ಚು ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರ ಭೇಟಿ, ಪ್ರವಾಸದ ಆಯೋಜನೆ ಮಾಡಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ.

ಧನು ರಾಶಿ

ಇಂದು ನಿಮಗೆ ಶುಭ ದಿನ. ಗೃಹಸ್ಥ ಜೀವನದಲ್ಲಿ ಸಂತೋಷ ಕಾಣಲಿದ್ದೀರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಹಿರಿಯ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ತಂದೆ ಮತ್ತು ಹಿರಿಯರಿಂದ ಲಾಭವಿದೆ.

ಮಕರ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯಗಳಲ್ಲಿ ಹೊಸ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ, ಅದನ್ನು ಅಳವಡಿಸಿಕೊಳ್ತೀರಿ. ಸೃಜನಾತ್ಮಕ ಶಕ್ತಿಯ ಪರಿಚಯವಾಗಲಿದೆ.

ಕುಂಭ ರಾಶಿ

ಅನೈತಿಕ ಕೃತ್ಯಗಳಿಂದ ದೂರವಿರಿ. ಮಾತಿನ ಮೇಲೆ ಸಂಯಮವಿರಲಿ. ಮನೆಯಲ್ಲಿ ಘರ್ಷಣೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ, ಇದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.

ಮೀನ ರಾಶಿ

ದೈನಿಕ ಕಾರ್ಯಗಳನ್ನು ಬದಿಗಿಟ್ಟು ಇಂದು ಸುತ್ತಾಡಲಿದ್ದೀರಿ. ಮನರಂಜನೆಗೆ ಸಮಯ ಮೀಸಲಾಗಿಡುತ್ತೀರಿ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಾಥ್ ಕೊಡಲಿದ್ದಾರೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ

$
0
0
dosa 9

ದೋಸೆ ಎಂದ ಕೂಡಲೇ ಅಕ್ಕಿ ಹಿಟ್ಟಿನಿಂದ ಇಲ್ಲವೇ ರವೆಯಿಂದ ಮಾಡಿದ ದೋಸೆಗಳು ನೆನಪಾಗುತ್ತವೆ. ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ ಮೊದಲಾದ ದೋಸೆಗಳ ಬಗ್ಗೆ ಹೆಚ್ಚಾಗಿ ಕೇಳಿರುತ್ತೀರಿ.

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗೋಧಿ ದೋಸೆಯ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಪದಾರ್ಥಗಳು: ಜವೆಗೋಧಿ ಅಥವಾ ಕೆಂಪು ಗೋಧಿ-1 ಕೆಜಿ, ಉಪ್ಪು- 2 ಚಮಚ, ಸೋಡಾ-1 ಚಮಚ, ವನಸ್ಪತಿ-300 ಗ್ರಾಂ ರೆಡಿಮಾಡಿ ಇಟ್ಟುಕೊಳ್ಳಿರಿ.

ಮಾಡುವ ವಿಧಾನ: ಗೋಧಿಯನ್ನು 3 ಗಂಟೆ ನೀರಿನಲ್ಲಿ ನೆನೆಯಲು ಇಡಿ. ನಂತರ ನೀರನ್ನು ಚೆಲ್ಲಿ 2 ಗಂಟೆ ಕಾಲ ಬಿಸಿಲಿನಲ್ಲಿ ಒಣಗಿಸಿ, ಗೋಧಿಯನ್ನು ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಸೋಡಾ, ಉಪ್ಪು ಹಾಗೂ ನೀರು ಹಾಕಿ ಕಲೆಸಿರಿ. ಬೇಕಾದರೆ, ಒಣಮೆಣಸಿನ ಪುಡಿ ಹಾಗೂ ಬಿಳಿಮೆಣಸನ್ನು ಎರಡು ಚಮಚ ಹಾಕಿದರೆ ಖಾರ ಇರುತ್ತದೆ.

ಕಾವಲಿಯನ್ನು ಗ್ಯಾಸ್ ಒಲೆಯ ಮೇಲಿಟ್ಟು ಕಾಯಿಸಿ, ಚಮಚದಿಂದ ಹಿಟ್ಟು ತೆಗೆದು ದೋಸೆ ಹಾಕಿರಿ, ಕರಗಿಸಿದ ವನಸ್ಪತಿಯನ್ನು ಹಾಕಿ ಎರಡು ಕಡೆ ಹಾಕಿ, ದೋಸೆ ಕೆಂಪಗೆ ಕಾದ ಮೇಲೆ ತಟ್ಟೆಗೆ ಹಾಕಿಕೊಂಡು ಪಲ್ಯ, ಚಟ್ನಿಯೊಂದಿಗೆ ಸವಿಯಿರಿ.

ಅಪ್ಪಿತಪ್ಪಿಯೂ ಮನೆಯಲ್ಲಿಡಬೇಡಿ ಈ ವಸ್ತು

$
0
0

ಅಚಾನಕ್ ಖರ್ಚು ಹೆಚ್ಚಾದ್ರೆ, ಕೈನಲ್ಲಿ ಹಣ ನಿಲ್ತಿಲ್ಲವೆಂದಾದ್ರೆ, ಒಂದಾದ ಮೇಲೆ ಒಂದು ಕಷ್ಟ ಬರ್ತಿದೆ ಎಂದಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿದೆ ಎಂದರ್ಥ. ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ಘಟನೆ ನಕಾರಾತ್ಮಕ ಶಕ್ತಿ ಬಗ್ಗೆ ಸೂಚನೆ ನೀಡುತ್ತದೆ.

ಶಾಸ್ತ್ರದ ಪ್ರಕಾರ ಮನೆಯ ನಲ್ಲಿ ಅಥವಾ ಗೋಡೆಯ ಮೇಲೆ ನೀರು ಬೀಳ್ತಿದ್ದರೆ ಅದು ಶುಭ ಸಂಕೇತವಲ್ಲ. ಇದು ಆರ್ಥಿಕ ಸಂಕಷ್ಟದ ಬಗ್ಗೆ ಸುಳಿವು ನೀಡುತ್ತದೆ. ಮನೆಯ ನಲ್ಲಿಯಲ್ಲಿ ನೀರು ಬೀಳ್ತಿದ್ದರೆ ತಕ್ಷಣ ಬದಲಾಯಿಸಿ. ವಾಸ್ತುದೋಷ, ನಕಾರಾತ್ಮಕ ಶಕ್ತಿ ಆಕರ್ಷಣೆಗೆ ಅವಕಾಶ ನೀಡಬೇಡಿ.

ಇತ್ತೀಚಿನ ದಿನಗಳಲ್ಲಿ ನಕಲಿ ಹೂಗಳನ್ನು ಮನೆಯಲ್ಲಿಡಲಾಗುತ್ತದೆ. ಆದ್ರೆ ನಕಲಿ ಹೂ ವಾಸ್ತು ಪ್ರಕಾರ ಶುಭವಲ್ಲ. ಅದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಮನೆಯಲ್ಲಿ ಎಂದೂ ಅಸಲಿ ಹೂವಿರಬೇಕು.

ಮನೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತು ಪದೇ ಪದೇ ಹಾಳಾಗ್ತಿದ್ರೆ ರಾಹು ಕೆಟ್ಟ ಪ್ರಭಾವ ನಿಮ್ಮ ಮೇಲೆ ಬಿದ್ದಿದೆ ಎಂದರ್ಥ. ಆದಷ್ಟು ಬೇಗ ಹಾಳಾದ ಬಲ್ಬ್ ಬದಲಿಸಿ. ವಸ್ತುಗಳನ್ನು ರಿಪೇರಿ ಮಾಡಿ. ಇಲ್ಲವಾದ್ರೆ ನಷ್ಟ ಅನುಭವಿಸಬೇಕಾಗುತ್ತದೆ.

ಮನೆಗೆ ಆಗಾಗ ಬೆಕ್ಕುಗಳು ಬರ್ತಿದ್ದರೆ ಅದೃಷ್ಟ ಕೆಟ್ಟಿದೆ ಎಂದರ್ಥ. ಇದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆ ಕಾಡುತ್ತದೆ.

ಇಂದು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ

$
0
0

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಶಾಲಾ-ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ.

ಅಲ್ಲದೆ ಶೋಕಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳನ್ನು ಆಚರಿಸದಂತೆ ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುವಂತೆ ನಿರ್ದೇಶನ ನೀಡಲಾಗಿದೆ.

ಮಾಜಿ ಪ್ರಧಾನಿ ವಾಜಪೇಯಿಯವರ ನಿಧನದ ಸಂದರ್ಭದಲ್ಲಿ ಅವರ ಕಡೆ ಆಶಯದಂತೆ ರಜೆ ಘೋಷಿಸುವ ಕುರಿತು ಮೊದಲು ಗೊಂದಲ ಏರ್ಪಟ್ಟಿತ್ತಾದರೂ ಅಂತಿಮವಾಗಿ ರಜೆ ನೀಡಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.

Viewing all 122063 articles
Browse latest View live


<script src="https://jsc.adskeeper.com/r/s/rssing.com.1596347.js" async> </script>