ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಹಾಡುಗಾರ ನಿಕ್ ಜೋನಸ್ ಉಂಗುರ ಬದಲಿಸಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಪ್ರಿಯಾಂಕ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತ್ರ ನಿಕ್-ಪ್ರಿಯಾಂಕ ಉಂಗುರ ಬದಲಿಸಿಕೊಂಡ್ರು. ನಂತ್ರ ಸಂಜೆ ಎಂಗೇಜ್ಮೆಂಟ್ ಪಾರ್ಟಿ ಅದ್ಧೂರಿಯಾಗಿ ನಡೆಯಿತು.
ಹಿಂದೂ ಪದ್ಧತಿಯಂತೆ ನಿಶ್ಚಿತಾರ್ಥ ನಡೆದ್ರೆ ವೆಸ್ಟರ್ನ್ ಪದ್ಧತಿಯಂತೆ ಪಾರ್ಟಿ ಏರ್ಪಡಿಸಲಾಗಿತ್ತು. ಪ್ರಿಯಾಂಕ ಪಾರ್ಟಿಗೆ ಅನೇಕ ಬಾಲಿವುಡ್ ಗಣ್ಯರು ಆಗಮಿಸಿದ್ದರು.ಪ್ರಿಯಾಂಕ ಬಾವಿ ಅತ್ತೆ-ಮಾವ ಇಂಡಿಯನ್ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ರು.
ಮುಕೇಶ್ ಅಂಬಾನಿ,ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.ಆಲಿಯಾ ಭಟ್,ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಹಾಗೂ ಅರ್ಪಿತಾ ಪತಿ ಆಯುಷ್ ಶರ್ಮಾ,ಪ್ರಿಯಾಂಕ ಚೋಪ್ರಾ ಸಹೋದರಿ ಪರಿಣಿತಿ ಚೋಪ್ರಾ ಸೇರಿದಂತೆ ಅನೇಕರು ಪ್ರಿಯಾಂಕ ಪಾರ್ಟಿಗೆ ಬಂದಿದ್ರು.
ಮೂರು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ಮಾರ್ಕೆಟಿಂಗ್ ಸಲಹೆಗಾರ್ತಿ ಸುಪ್ರಿಯಾ ಜೈನ್ ಜೀವನದಲ್ಲಿ ಮತ್ತೆ ಖುಷಿ ಕಾಣಿಸಿದೆ. ಮನೆಯಲ್ಲಿ ಮಗುವಿನ ಧ್ವನಿ ಕೇಳಲಿದೆ. ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪತಿಯಿಂದ ಸುಪ್ರಿಯಾ ಮಗು ಪಡೆದಿದ್ದಾಳೆ. ಐವಿಎಫ್ ತಂತ್ರಜ್ಞಾನ ಬಳಸಿ ಸುಪ್ರಿಯಾ ತಾಯಿಯಾಗಿದ್ದಾರೆ.
ಸುಪ್ರಿತಾ ಹಾಗೂ ಗೌರವ್ 2015ರಲ್ಲಿ ಸಂತಾನಕ್ಕೆ ಪ್ರಯತ್ನ ಶುರು ಮಾಡಿದ್ದರು. ಇಬ್ಬರೂ ಐವಿಎಫ್ ಚಿಕಿತ್ಸೆ ಶುರು ಮಾಡಿದ್ದರು. ಈ ಮಧ್ಯೆ ಗೌರವ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಇದ್ರಿಂದ ನೊಂದಿದ್ದ ಸುಪ್ರಿಯಾ ಬ್ಲಾಗ್ ಬರೆಯಲು ಶುರು ಮಾಡಿದ್ದರು. ಕುಟುಂಬಸ್ಥರ ಸಲಹೆ ಪಡೆದು ಮೃತ ಪತಿಯ ಮಗುವಿಗೆ ತಾಯಿಯಾಗುವ ನಿರ್ಧಾರ ತೆಗೆದುಕೊಂಡ್ರು.
ಮುಂಬೈನ ವೈದ್ಯ ಫಿರೋಜ್ ಅವ್ರನ್ನು ಸಂಪರ್ಕಿಸಿದ ಸುಪ್ರಿಯಾ ಚಿಕಿತ್ಸೆ ಶುರುಮಾಡಿದ್ದರು. ಆದ್ರೆ ಐವಿಎಫ್ ನಿಂದ ಸುಪ್ರಿಯಾ ಗರ್ಭ ಧರಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಸುಪ್ರಿಯಾ ಬಾಡಿಗೆ ತಾಯಿಯ ಸಹಾಯ ಪಡೆದು ಮಗು ಪಡೆದಿದ್ದಾರೆ. ಪತಿಯನ್ನು ಹೋಲುವ ಮಗು ಕೈಗೆ ಬಂದಿದ್ದು, ಸುಪ್ರಿಯಾ ಖುಷಿಗೆ ಕಾರಣವಾಗಿದೆ.
ಬೆಂಗಳೂರು: ಕೊಡಗಿನ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಮಾಡಿಕೊಂಡ ಮನವಿಗೆ ನೆರವಿನ ಮಹಾಪೂರವೆ ಹರಿದುಬರುತ್ತಿದೆ.
ನೆಚ್ಚಿನ ನಟನ ಮನವಿಗೆ ದರ್ಶನ್ ಅಭಿಮಾನಿಗಳ ಸಂಘ ಕುಣಿಗಲ್ ಮತ್ತು ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಲಕ್ಷ್ಮೀಪುರ ತಂಡದ ಸದಸ್ಯರು ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ಕೈಲಾದಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಅಲ್ಲದೇ ಸಹಾಯ ಮಾಡಲು ಮುಂದಾದರೆ ಅಂತಹವರಿಗೆ ವಿಳಾಸವನ್ನು ಕೂಡ ಟ್ವೀಟ್ ಮಾಡಿದ್ದಾರೆ.
ನಿಮ್ಮ ವಸ್ತುಗಳನ್ನು ತಲುಪಿಸಬಹುದಾದ ವಿಳಾಸ
ತೂಗುದೀಪ ಔಟ್ ಡೋರ್ ಯುನಿಟ್ ಕಚೇರಿ, ವಿಶ್ವ ನಿವಾಸ. ನಂ 476/ಎ ಮತ್ತು 476/ಎ1, 15ನೇ ಕ್ಲಾಸ್ ಗೌರಿ ಲಂಕೇಶ್ ಮನೆಯ ಎದುರು, ಐಡಿಯಲ್ ಓಂ ಶಿಪ್, ರಾಜರಾಜೇಶ್ವರಿ ನಗರ ಬೆಂಗಳೂರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಶ್ಯಾಂ ಗಜ : 9535452291
ಆಪಲ್ ಕಂಪನಿಯ ಅಭಿಮಾನಿ ಬಾಲಕ, ಸಂಸ್ಥೆಯ ಮುಖ್ಯ ಸರ್ವರನ್ನೇ ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಆಪಲ್ ಕಂಪನಿಯಲ್ಲಿ ಕೆಲಸ ಮಾಡುವ ದೊಡ್ಡ ಆಸೆ ಹೊಂದಿದ್ದ ಮೆಲ್ಬೋರ್ನ್‌ನ 16 ವರ್ಷದ ಬಾಲಕ, ಎಲ್ಲರ ಗಮನ ಸೆಳೆಯಲು ಈ ಕೆಲಸ ಮಾಡಿದ್ದಾನೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಸಹ ತನ್ನ 15ನೇ ವರ್ಷದಲ್ಲಿ ದೊಡ್ಡ ಸಂಸ್ಥೆಯೊಂದರ ಸರ್ವರ್ ಹ್ಯಾಕ್ ಮಾಡಿದ್ದರು. ಅದೇ ಮಾದರಿಯಲ್ಲಿ 16 ವರ್ಷದ ಬಾಲಕ ಆಪಲ್ ಸರ್ವರ್‌ನ್ನು ಹ್ಯಾಕ್ ಮಾಡಿದ್ದಾನೆ.
ಆಸ್ಟ್ರೇಲಿಯಾ ಪ್ರಜೆಯಾಗಿರುವ ಬಾಲಕ ಕ್ಯಾಲಿಫೋರ್ನಿಯಾದಲ್ಲಿ ಕುಳಿತು ಸುಮಾರು 90 ಜಿಬಿಯಷ್ಟು ಸಂಸ್ಥೆಯ ಗ್ರಾಹಕರ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾನೆ.
ಗ್ರಾಹಕ ಮಾಹಿತಿ ಇರುವ ಡೇಟಾಗಳು ಹ್ಯಾಕ್ ಆಗಿರುವುದನ್ನು ಸಂಸ್ಥೆ ಖಚಿತಪಡಿಸಿದ್ದು, ಇದರಿಂದ ಅಪಾಯಗಳಿಲ್ಲ ಎಂದೂ ಹೇಳಿದೆ. ಆಪಲ್ ತನ್ನ ಸರ್ವರ್‌ಗಳಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದ್ದಾರೆ ಎಂದು ಎಫ್‌ಬಿಐಗೆ ಮಾಹಿತಿ ನೀಡಿತ್ತು. ಬಾಲಕನ ಮನೆಗೆ ದಾಳಿ ಮಾಡಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದರು. ಪ್ರಕರಣ ಕೋರ್ಟ್‌ನಲ್ಲಿದ್ದು, ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ನ್ಯಾಯಾಲಯ ಮುಂದಿನ ತಿಂಗಳು ತೀರ್ಪು ನೀಡಲಿದೆ.
ಮುಂಬೈ: ದಿವಾಳಿಯಾದ ವಾಣಿಜ್ಯ ಕಂಪನಿಗಳ ಮೌಲ್ಯಮಾಪನ ಸಂಬಂಧ ಪ್ರತ್ಯೇಕ ಕಾಯ್ದೆ ರಚಿಸಲು ಸರಕಾರ ಮುಂದಾಗಿದೆ. ಕಳೆದ ಜುಲೈನಿಂದ 40 ಅತ್ಯಂತ ದೊಡ್ಡ ಎನ್‌ಪಿಎ ಖಾತೆಗಳನ್ನು ಎನ್‌ಸಿಎಲ್‌ಟಿಗೆ ಕಳುಹಿಸಲಾಗಿದೆ.
11 ಟ್ರಿಲಿಯನ್ ಮರುಪಾವತಿ ಆಗದ ಸಾಲಗಳ ಪೈಕಿ ಶೇ. 40 ರಷ್ಟು ಇವುಗಳವು. ಈವರೆಗೆ 7 ನ್ನು ಬ್ಯಾಂಕ್‌ಗಳು ಬಗೆಹರಿಸಿಕೊಂಡಿವೆ. ಸಂಸ್ಥೆಗಳು ದಿವಾಳಿ ಘೋಷಿಸಿದ ವೇಳೆ, ಬ್ಯಾಂಕ್‌ಗಳಿಗೆ ಸಲ್ಲಬೇಕಾದ ಹಣದ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೊಸ ಕಾನೂನು ಸಹಕಾರಿಯಾಗಲಿದೆ.
ಈವರೆಗೆ ದಿವಾಳಿತನದ ವೇಳೆ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಲು ನೋಂದಾಯಿತಗೊಂಡವರು ಇದ್ದರು. ಆದರೆ ಇದಕ್ಕೆ ಅಗತ್ಯವಾದ ಕಾನೂನುಗಳಿರಲಿಲ್ಲ. ಚಾರ್ಟೆಡ್ ಅಕೌಂಟೆಂಟ್ ಹಾಗೂ ಕಂಪನಿ ಕಾರ್ಯದರ್ಶಿಗಳಿಗೆ ಅನ್ವಯವಾಗುವಂತೆ ಹೊಸ ಕಾನೂನು ರಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿವಾಳಿತನದ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಅನೇಕ ಮಂದಿ ಪಾಲುದಾರರು ಇರುತ್ತಾರೆ. ಎಲ್ಲ ವಿಭಾಗದಲ್ಲಿ ಲೆಕ್ಕಾಚಾರದ ವೇಳೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ತ್ವರಿತ ಹಾಗೂ ಕಾನೂನಿನ ಚೌಕಟ್ಟಿನೊಳಗೆ ನಿಗದಿತ ಸಮಯದಲ್ಲಿ ಸಂಸ್ಥೆಯ ಮೌಲ್ಯಮಾಪನ ಹಾಗೂ ಇನ್ನಿತರ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ನಿಯಮ ರೂಪಿಸಲು ಸರಕಾರ ಮುಂದಾಗಿದೆ. ಪ್ರಮೋಟರ್‌ಗಳಿಗೆ ಬಾಕಿ ಇರುವ ಸಾಲಗಳನ್ನು ಪಾವತಿಸಲು ಮತ್ತೊಂದು ಅವಕಾಶವನ್ನೂ ಕೊಡಲಿದೆ. ಉದ್ಯಮಿ ಸ್ನೇಹಿಯಾದ ಕಾನೂನು ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರಂ: ವರುಣನ ರೌದ್ರಾವತಾರಕ್ಕೆ ದೇವರನಾಡು ಕೇರಳ ಸಂಪೂರ್ಣ ತತ್ತರಿಸಿಹೋಗಿದೆ. ಕಳೆದ 15 ದಿನಗಳಿಂದ ಉಂಟಾಗಿರುವ ಭಾರೀ ಪ್ರವಾಹಕ್ಕೆ ರಾಜ್ಯದ ಬಹುತೇಕ ಭಾಗಗಳು ಕೊಚ್ಚಿಹೋಗಿವೆ. ಸಾವಿನ ಸಂಖ್ಯೆ 357 ಕ್ಕೆ ಏರಿಕೆಯಾಗಿದೆ. ರಕ್ಷಣೆಗಾಗಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಇಂದು ಅಥವಾ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ಮತ್ತೆ ಮಳೆಯಾದರೆ ಸದ್ಯಕ್ಕೆ ವ್ಯವಸ್ಥೆ ಮಾಡಿರುವ ನಿರಾಶ್ರಿತ ಕೇಂದ್ರಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು, ಸಂತ್ರಸ್ತರು ಇನ್ನಷ್ಟು ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ. ಕಾಸರಗೋಡು ಮತ್ತು ತಿರುವನಂತಪುರ ಹೊರತುಪಡಿಸಿ ಬೇರೆಲ್ಲಾ ಜಿಲ್ಲೆಗಳಿಗೆ ತೀವ್ರ ಕಟ್ಟೆಚ್ಚರ ವಿಧಿಸಲಾಗಿದೆ.
ಕಳೆದ 9 ದಿನಗಳಲ್ಲೇ 197 ಜನರು ಪ್ರವಾಹಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 33 ಜನ ಸಾವಿಗೀಡಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ 10 ಸಾವಿರಕ್ಕೂ ಹೆಚ್ಚು ಜನರನ್ನು ಎನ್ಡಿಆರ್ಎಫ್ ಸಿಬ್ಬಂದಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಒಟ್ಟು 58 ರಕ್ಷಣಾ ತಂಡ ಕಾರ್ಯಕ್ಕೆ ನಿಯೋಜಿತವಾಗಿದ್ದು ಅವರಲ್ಲಿ 55 ತಂಡಗಳು ಈಗಾಗಲೇ ಕಾರ್ಯನಿರತವಾಗಿವೆ. ಒಟ್ಟು 10,467 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದಾರೆ. 159 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗಿನಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಅವರು ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಸೋಮವಾರಪೇಟೆ, ಶುಂಠಿಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದರು.
ನಂತರ ಪಿರಿಯಾಪಟ್ಟಣ ಹೆಲಿಪ್ಯಾಡ್ ನಲ್ಲಿ ಇಳಿದು ಮಡಿಕೇರಿಗೆ ತೆರಳಿದರು. ಮಾರ್ಗಮಧ್ಯದಲ್ಲಿ ಮಳೆಹಾನಿಗೆ ಒಳಗಾದ ಕೆಲವು ಸ್ಥಳ ಪರಿಶೀಲನೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.
ಚಿತ್ರರಂಗದಲ್ಲಿ ಮದುವೆಯಾದ ಮೇಲೆ ನಟಿಯರಿಗೆ ಬೇಡಿಕೆಗಳು ಕಡಿಮೆಯಾಗುತ್ತೆ. ಅದರಲ್ಲೂ ಒಂದು ಮಗುವಿನ ತಾಯಿಯಾದ ಮೇಲಂತೂ ಆ ನಟಿಯರಿಗೆ ನೀಡುವ ಸಂಭಾವನೆ ಜತೆಗೆ ಅವಕಾಶಗಳೂ ಕಡಿಮೆಯಾಗುತ್ತೆ. ಇನ್ನು ನೋಡೊ ಜನರು ಮೂಗು ಮುರಿಯಲು ಆರಂಭಿಸುತ್ತಾರೆ. ಆದರೆ ಇದಕ್ಕೆಲ್ಲ ಭಿನ್ನವಾಗಿ ನಿಲ್ಲುತ್ತಾರೆ ಬಾಲಿವುಡ್ ನಟಿ ಕರೀನಾ ಕಪೂರ್.
ಹೌದು, ಕರೀನಾ ಬಾಲಿವುಡ್‍ನಲ್ಲಿ ಹೊಸ ದಾಖಲೆ ಬರೆಯೋಕೆ ಹೊರಟಂತಿದೆ. ಒಂದು ಮಗುವಿನ ತಾಯಿ ಆದ ಮೇಲೂ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ ಎಂಬುದು ವಿಶೇಷ.
ಮಹಿಳಾ ಪ್ರಧಾನ ಚಿತ್ರ ‘ವೀರೇ ದಿ ವೆಡ್ಡಿಂಗ್’ ಬಾಕ್ಸಾಫೀಸ್‍ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಸಿನಿಮಾಗೆ ಕರೀನಾ ಕಪೂರ್ 7 ಕೋಟಿ ಸಂಭಾವನೆ ಪಡೆದಿದ್ದರಂತೆ. ಈ ಚಿತ್ರದ ಯಶಸ್ಸು ಈಗ ಕರೀನಾ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಕರೀನಾ ತಮ್ಮ ಕಾಲ್ಶೀಟ್ ಗೆ 10 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಸುಮಾರು 18 ವರ್ಷಗಳಿಂದ ಬಾಲಿವುಡ್‍ನಲ್ಲಿರೋ ಕರೀನಾ ಸೋಲು-ಗೆಲುವು, ಪ್ರಶಸ್ತಿ, ಟೀಕೆ ಹೀಗೆ ಎಲ್ಲದಕ್ಕೂ ಒಳಗಾದವರು. ಆದಾಗ್ಯೂ ಕರೀನಾ ಬೇಡಿಕೆ ಮಾತ್ರ ಕುಗ್ಗಿಲ್ಲ. ಇನ್ನೂ ಟಾಪ್ ಹಿರೋಯಿನ್ ಗಳ ಸಾಲಿನಲ್ಲಿಯೇ ಇದ್ದಾರೆ. ಮದುವೆಯಾಗಿ, ಒಂದು ಮಗುವಿನ ತಾಯಿ ಆದ ಮೇಲೂ ಕರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನಾವತ್ ಅವರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ನಿಜಕ್ಕೂ ಗಮನಾರ್ಹ.
ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.
ಕೊಡಗು ಜಿಲ್ಲಾಡಳಿತವು ರಕ್ಷಣೆ ಹಾಗೂ ಪರಿಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸೇನಾ ಸಿಬ್ಬಂದಿ, ಎನ್.ಡಿ.ಆರ್.ಎಫ್. ಮತ್ತಿತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈವರೆಗೆ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿಯವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಗಳು ಕರೆಮಾಡಿ ತೋರಿದ ಕಾಳಜಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.
18ನೇ ಏಷ್ಯನ್ ಗೇಮ್ಸ್ ನ ಮೊದಲ ದಿನ ಭಾರತ ಪದಕ ಬಾಚಿಕೊಂಡಿದೆ. 10 ಮೀಟರ್ ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಭಾರತ ತಂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ಭಾನುವಾರ ಜಕಾರ್ತದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ, ಫೈನಲ್ ಗೆ ಅರ್ಹತೆ ಪಡೆದುಕೊಂಡಿತ್ತು. ಅಂತಿಮ ಸುತ್ತಿನ ಕಾದಾಟದಲ್ಲಿ ಭಾರತದ ಅಪೂರ್ವಿ ಚಾಂಡಿಲಾ ಹಾಗೂ ರವಿಕುಮಾರ್ ಜೋಡಿ ನಿಖರ ಗುರಿಯ ಮೂಲಕ ಗಮನ ಸೆಳೆಯಿತು.
ಅಂತಿಮವಾಗಿ ಭಾರತ ತಂಡ 429.9 ಅಂಕಗಳನ್ನು ಕಲೆ ಹಾಕುವ ಮೂಲಕ ಪೋಡಿಯಂನಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ತೈಪೆ ಮೊದಲಹಾಗೂ ಚೀನಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ.
ಭಾರತದ ಸ್ಟಾರ್ ಕುಸ್ತಿ ಪಟು ಸುಶೀಲ್ ಕುಮಾರ್ ಮೊದಲ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಬಹ್ರೇನ್ ಆಟಗಾರನ ಎದುರು ಮಂಡಿಯೂರಿದ ಸುಶೀಲ್ ಪದಕ ಆಸೆಯನ್ನು ಕೈ ಬಿಟ್ಟಿದ್ದಾರೆ.
ಮಡಿಕೇರಿ: ಭಾರೀ ಮಳೆ, ಗುಡ್ಡ ಕುಸಿತ, ಜಲಪ್ರಳಯಕ್ಕೆ ಈಡಾಗಿರುವ ಕೊಡಗು ಜಿಲ್ಲೆಯ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಅಲ್ಲಿದ್ದ ಮನೆಗಳು ಏನಾದವು, ಗ್ರಾಮಸ್ಥರ ಸ್ಥಿತಿ ಏನಾಯಿತು, ರಕ್ಷಣೆಗಾಗಿ ಹೋದವರು ಏನಾದರು ಎಂಬುದೂ ತಿಳಿಯದ ರೀತಿಯಲ್ಲಿ ಊರಿಗೆ ಊರೇ ಭೂಗತವಾಗಿ ಹೋಗಿದೆ.
ಮಡಿಕೇರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ 13 ಗ್ರಾಮಗಳ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಮಾಹಿತಿಯೇ ಸಿಗುತ್ತಿಲ್ಲ. ಮುಕೋಡ್ಲು, ದೇವಸ್ತೂರು, ಹಮ್ಮಿಯಾಲ, ತಂತಿಪಾಲ, ಕಾಲೂರು, ಸೂರ್ಲಬ್ಬಿ, ಹೆಬ್ಬೆಟ್ಟಗೇರಿ, ಮಾಂದಲಪಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಊರಿಗೆ ಊರೇ ಹೇಳ ಹೆಸರಿಲ್ಲದಂತೆ ನಾಮಾವಶೇಷವಾಗಿದೆ. ಈ ಗ್ರಾಮಗಳಲ್ಲಿನ 1500ಕ್ಕೂ ಹೆಚ್ಚು ಮಂದಿಯ ಸ್ಥಿತಿ ಏನಾಗಿದೆ…? ರಕ್ಷಣೆಗೆಂದು ಹೋದವರು ಏನಾದರು…?ಎಲ್ಲವೂ ನಿಗೂಢವಾಗಿದೆ.
ಗ್ರಾಮಗಳು ಭೂಕುಸಿತಕ್ಕೆ ಒಳಗಾಗಿ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ತಮ್ಮ ಬಂಧುಗಳ ಸ್ಥಿತಿ ಏನಾಗಿದೆ ಎಂಬುದೂ ಯಾರಿಗೂ ತಿಳಿಯುತ್ತಿಲ್ಲ. ಬಂಧುಗಳನ್ನು ಹುಡುಕಲು ಹೋದ ಹಲವರು ವಾಪಸ್ ಬಂದಿಲ್ಲ. ಯಾರೊಬ್ಬರ ಬಗ್ಗೆಯೂ ಮಾಹಿತಿ ತಿಳಿಯುತ್ತಿಲ್ಲ, ಗಾಬರಿಯಿಂದ ಜನರು ಕಂಗಾಲಾಗಿದ್ದಾರೆ. ಇನ್ನು ಮುಕ್ಕೋಡ್ಲು ಗ್ರಾಮದಲ್ಲಿ ವಾರದ ಹಿಂದೆ ಮಗುವಿನ ಜನನವಾಗಿತ್ತು. ಆದರೆ, ಮಳೆಯಿಂದಾಗಿ ಮನೆ ಕಳೆದುಕೊಂಡ ಬಾಣಂತಿ, ಪೋಷಕರು ಮನೆಯಿಂದ ಹೊರಗೋಡಿ ಬೆಟ್ಟದಲ್ಲಿ ಆಶ್ರಯ ಪಡೆದರು. ಸೇನಾಪಡೆ ಹಾಗೂ ಸ್ಥಳೀಯರು ಅವರನ್ನು ರಕ್ಷಿಸಿ ಕರೆತಂದರೂ ಹಸುಗೂಸು ಮಳೆಯಿಂದಾಗಿ ಕೊನೆಯುಸಿರೆಳೆದಿದೆ.
ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡವಿಲ್ಲ. ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಹಾಗೂ ಸಲಕರಣೆಗಳ ಕೊರತೆ ಇದೆ. ಕೊಡಗಿನಲ್ಲಿ ಶೇ. 60 ರಷ್ಟು ಸಿಬ್ಬಂದಿ ಖಾಲಿಯಿದ್ದು, ಮುಖ್ಯವಾಗಿ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಗಳೂ ಇಲ್ಲ. ಜಿಲ್ಲೆಯ ಬಹುತೇಕ ಪ್ರದೇಶ ಕಳೆದ ಹಲವು ದಿನಗಳಿಂದ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿ ಮುಳುಗಿದೆ. ಎಲ್ಲಾ ಎಟಿಎಂಗಳು ಬಂದ್ ಆಗಿವೆ. ಬ್ಯಾಂಕ್‌ಗಳೂ ಬಂದ್ ಆಗಿವೆ. ಅಂಗಡಿಗಳಲ್ಲಿ ಇರುವ ಸಾಮಗ್ರಿ ಮುಗಿಯುತ್ತಲಿದೆ. ಗ್ಯಾಸ್, ಸೀಮೆ ಎಣ್ಣೆ, ಪೆಟ್ರೋಲ್ ಪೂರೈಕೆ ಇಲ್ಲದೆ ಜನರು ತೊಂದರೆಗೀಡಾಗಿದ್ದಾರೆ. ಜಿಲ್ಲೆಯ ಜನತೆಯ ಸಂಕಷ್ಟ ಹೇಳತೀರದಾಗಿದೆ.
ಕೊಡಗು ಜಿಲ್ಲೆಯ ಪ್ರವಾಹಪೀಡಿತ ಸಂತ್ರಸ್ಥರ ಸಂಕಷ್ಟ, ಗೋಳಿನ ದೃಶ್ಯಗಳನ್ನು ಟಿವಿಯಲ್ಲಿ ನೋಡಿದ ಪುಟ್ಟ ಬಾಲಕಿ ತನ್ನ ಬಳಿ ಇದ್ದ ಹಣ, ಚಾಕಲೇಟ್, ಬಿಸ್ಕೇಟ್ ಗಳನ್ನು ಸಂತ್ರಸ್ಥರಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾಗಿದ್ದಾಳೆ
ಪ್ರವಾಹ ಸಂತ್ರಸ್ಥರ ಸ್ಥಿತಿ ಕಂಡು ಮರುಗಿದ ಈ ಪುಟ್ಟ ಬಾಲಕಿ, ಅಪ್ಪ ಆಗಾಗ ನೀಡುವ ಒಂದೆರಡು ರೂ. ಹಣ, ಜಾತ್ರೆಯಲ್ಲಿ ಬಟ್ಟೆ ಖರೀದಿಸಲು ಸಂಗ್ರಹಿಸಿದ ಹಣ ಎಲ್ಲವನ್ನೂ ಸೇರಿಸಿ ಸಂತ್ರಸ್ಥರಿಗೆ ನೀಡಲು ಮುಂದಾಗಿದ್ದಾಳೆ.
ವಿಜಯಪುರ ಜಿಲ್ಲೆಯ ದದಾಮಟ್ಟಿ ಗ್ರಾಮದ 4ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ರವಿ ಬೆನಕಟ್ಟಿ ಸಾರವಾಡ ಗ್ರಾಮದಲ್ಲಿ ಶಾಲೆ ಕಲಿಯುತ್ತಿದ್ದಾಳೆ. ಕಳೆದ ನಾಲ್ಕೈದು ದಿನಗಳಿಂದ ಕೊಡಗಿನ ದುಃಸ್ಥಿತಿ ಕುರಿತು ಟಿವಿಯಲ್ಲಿ ನೋಡಿದ್ದಾಳೆ. ಅದನ್ನು ಕಂಡು ಮರುಗಿದ ಬಾಲಕಿ, ಎರಡು ದಿನಗಳಿಂದ ತಮ್ಮ ತಂದೆಗೆ ತಾನು ಯಾರಿಗೂ ಹೇಳದೆ ಸಂಗ್ರಹಿಸಿದ ಹಣದ ಕುರಿತು ಮಾಹಿತಿ ನೀಡಿದ್ದಾಳೆ. ಅಲ್ಲದೇ, ಈ ಹಣವನ್ನು ಕೊಡಗು ಸಂತ್ರಸ್ಥರಿಗೆ ನೀಡಲು ಹಠ ಹಿಡಿದಿದ್ದಾಳೆ. ಮಗಳ ಹಠಕ್ಕೆ ಕರಗಿದ ತಂದೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಬಂದು ತಮ್ಮ ಮಗಳು ಸಂಗ್ರಹಿಸಿದ್ದ ಹಣದ ಡಬ್ಬಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.
ಬಾಲಕಿಯ ಹೃದಯವಂತಿಕೆಯನ್ನು ಮೆಚ್ಚಿದ ಜಿಲ್ಲಾಧಿಕಾರಿ ಕೆ.ಬಿ. ಶೆಟ್ಟೆಣ್ಣವರು ತಮ್ಮ ಬಳಿಯಿಂದಲೂ 500 ರೂಪಾಯಿ ನೋಟನ್ನು ಆ ಡಬ್ಬಿಯೊಳಗೆ ಹಾಕಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ಥರ ಸಂಕಷ್ಟಕ್ಕೆ ಮಿಡಿದು, ಈ ಪುಟ್ಟ ಬಾಲಕಿ ಮಾಡಿದ ಕಾರ್ಯ ನಿಜಕ್ಕೂ ಎಂತವರ ಕಣ್ಣನ್ನೂ ತೆರೆಸುವಂತಿದೆ.
ಕೇರಳದಲ್ಲಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿ ಸಂಗ್ರಹ ಹೆಸರಿನಲ್ಲಿ ಹಲವು ಅಕ್ರಮಗಳು ನಡೀತಿರೋದನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಕೇರಳ ಪೊಲೀಸರು ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ವ್ಯಕ್ತಿಯೊಬ್ಬನ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಕ್ಕಾಗಿ ಕೇರಳ ಸಿಎಂ ಪಿಣರಾಯ್ ವಿಜಯನ್ ಅವರ ಹೆಸರನ್ನು ದುರ್ಬಳಕೆ ಮಾಡೋಕೆ ಯತ್ನಿಸಿದ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಯನ್ನ ಎಸ್ಬಿಐ ಕೂಡ ಮುಟ್ಟುಗೋಲು ಹಾಕಿಕೊಂಡಿದೆ.
ತಿರುಚಿರಾಪಳ್ಳಿ ಮೂಲದ ವಿಜಯ್ ಕುಮಾರ್ ಹೆಸರಿನ ವ್ಯಕ್ತಿ ಕೇರಳ ಸಿಎಂ ಪರಿಹಾರ ನಿಧಿಯ ಬ್ಯಾಂಕ್ ಖಾತೆಯ ಸಂಖ್ಯೆ ಅಂತ ತನ್ನ ಬ್ಯಾಂಕ್ ಸಂಖ್ಯೆಯನ್ನ ಅನೇಕರಿಗೆ ನೀಡಿದ್ದ ಘಟನೆ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಹಲವು ಮಂದಿಗೆ ತನ್ನ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಕೇರಳ ಪ್ರವಾಹ ಪರಿಹಾರ ನಿಧಿಯ ಸಂಖ್ಯೆ ಅಂತ ನಂಬಿಸಿ ಸಂದೇಶ ಕಳಿಸಿದ್ದಾನೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಜಯ್ ಕುಮಾರ್ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದಾರೆ. ವಿಜಯ್ ಕುಮಾರ್ ಬಂಧನಕ್ಕೆ ಮುಂದಾಗಿದ್ದು, ಇದರ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹಾಸನ: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಕ್ಕೊಳಗಾಗಿರುವ ಶಿರಾಡಿಘಾಟ್ ನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ದುರಸ್ತಿಗೊಂಡು ಸಂಚಾರಕ್ಕೆ ಮುಕ್ತವಾಗಿದ್ದ ಶಿರಾಡಿ ಘಾಟ್ ರಸ್ತೆಯನ್ನು, 5 ತಿಂಗಳ ಕಾಲ ಸಂಚಾರಕ್ಕೆ ಮತ್ತೆ ನಿಷೇಧಿಸಲಾಗಿದೆ.
ಗುಡ್ಡ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗುತ್ತಿರುವುದರಿಂದ ರಸ್ತೆ ದುರಸ್ತಿ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಕೊಡಗು, ಮಡಿಕೇರಿ ರಸ್ತೆಗಳೂ ಸಹ ಸಂಪೂರ್ಣವಾಗಿ ಹಾಳಾಗಿದ್ದು, ಸುತ್ತಮುತ್ತಲ ಗ್ರಾಮಗಳಾದ ಅತ್ತಿಹಳ್ಳಿ, ಹೊಂಗಡಹಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಬೆಂಗಳೂರು: ನಿಯಮ ಉಲ್ಲಂಘನೆ, ಸ್ವಚ್ಛತೆ ಕಾಪಾಡದಿರುವುದು, ಆಹಾರ ಪೂರೈಕೆ ತಡ, ಗುಣಮಟ್ಟ ಕಾಪಾಡದಿರುವುದು, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಿಬಿಎಂಪಿ 82.55 ಲಕ್ಷ ರೂ. ದಂಡ ವಿಧಿಸಿದೆ.
ಇಂದಿರಾ ಕ್ಯಾಂಟೀನ್ ಆರಂಭವಾದಾಗಿನಿಂದಲೇ ಕ್ಯಾಂಟೀನ್ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಲು ಬಿಬಿಎಂಪಿ, ನಿವೃತ್ತ ಮಾರ್ಷಲ್‌ಗಳನ್ನು ಜ್ಯೂನಿಯರ್ ಕಮಿಷನ್ಡ್ ಆಫೀಸರ್ಸ್ ಎಂದು ನೇಮಕ ಮಾಡಿತ್ತು. ವೀಕ್ಷಕರು ನೀಡಿರುವ ದೂರುಗಳ ಆಧಾರದ ಮೇಲೆ ಈಗ ಗುತ್ತಿಗೆದಾರ ಸಂಸ್ಥೆಗಳಾದ ಚೆಫ್‌ಟಾಕ್ ಮತ್ತು ರಿವಾರ್ಡ್ಸ್‌ಗೆ ದಂಡ ವಿಧಿಸಿದೆ.
ಗುತ್ತಿಗೆದಾರರಿಗೆ ಬಿಬಿಎಂಪಿ ಪಾವತಿಸುವ ಮೊತ್ತದಲ್ಲಿಯೇ ಈ ದಂಡದ ಹಣವನ್ನು ಕಡಿತಗೊಳಿಸಲಾಗುವುದು ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ. ಶಿವರಾಜು ತಿಳಿಸಿದ್ದಾರೆ.
ಪ್ರತಿ ಬೆಳಗು ಹೊಸತನ ತರಲಿ ಎನ್ನುವುದು ಎಲ್ಲರ ಆಸೆ. ರಾತ್ರಿಯ ನೋವು, ಒತ್ತಡ ಬೆಳಿಗ್ಗೆ ಮಾಯವಾಗಿರಲಿ ಅಂತಾ ಎಲ್ಲರು ಬಯಸ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ವಿವರವಾಗಿ ಹೇಳಲಾಗಿದೆ. ಹಾಸಿಗೆಯಿಂದ ಎದ್ದ ನಂತ್ರ ಏನು ಮಾಡಿದ್ರೆ ಒಳ್ಳೆಯ ದಿನ ನಮ್ಮದಾಗುವ ಜೊತೆಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.
ಹಾಸಿಗೆಯಿಂದ ಏಳುವ ಮೊದಲು ನಿಮ್ಮ ಹಸ್ತಗಳನ್ನು ನೀವು ನೋಡಿಕೊಳ್ಳಬೇಕು. ಕೈಗಳಲ್ಲಿ ದೇವಿ ಲಕ್ಷ್ಮಿ, ಸರಸ್ವತಿ ಹಾಗೂ ವಿಷ್ಣು ವಾಸವಾಗಿರ್ತಾರೆ. ಇದರಿಂದಾಗಿ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.
ದೇವರ ಮನೆಯನ್ನು ಸ್ವಚ್ಛಗೊಳಿಸಬೇಕು. ದೇವರ ಮನೆ ಸುಂದರವಾಗಿದ್ದರೆ ದೇವತೆಗಳು ಪ್ರಸನ್ನವಾಗುತ್ತಾರೆ. ಜೊತೆಗೆ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ.
ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಭೂಮಿ ಮೇಲೆ ಕಾಲಿಡುವ ಮುನ್ನ ಭೂತಾಯಿಗೆ ನಮಸ್ಕರಿಸಿ. ನಮ್ಮ ಭಾರವನ್ನು ಹೊತ್ತುಕೊಳ್ಳುವ ಭೂತಾಯಿಗೆ ನಾವು ನಮಿಸಬೇಕಾಗುತ್ತದೆ.
ಬೆಳಿಗ್ಗೆ ಮೊದಲು ಮಾಡಿದ ಆಹಾರವನ್ನು ಹಸುವಿಗೆ ನೀಡಬೇಕು. ಇದರಿಂದ ಮೋಕ್ಷದ ಬಾಗಿಲು ನಮಗಾಗಿ ತೆರೆಯುತ್ತದೆ.
ಸೂರ್ಯ ನಮಸ್ಕಾರ ಮಾಡುವ ಜೊತೆಗೆ ನೀರನ್ನು ಅರ್ಪಣೆ ಮಾಡಬೇಕು. ಇದರಿಂದ ಗೌರವ, ಸನ್ಮಾನ ಪ್ರಾಪ್ತಿಯಾಗುತ್ತದೆ.
ಯಾವುದೇ ದೇವರ ಪೂಜೆಯನ್ನು ನೀವು ಮಾಡಿ, ಆದ್ರೆ ಎದ್ದ ನಂತ್ರ ಗಾಯತ್ರಿ ಮಂತ್ರವನ್ನು ಮೊದಲು ಜಪಿಸಿ. ಇದರಿಂದ ಆತ್ಮ ಶುದ್ಧವಾಗುವ ಜೊತೆಗೆ ನೀವು ಮಾಡಿದ ಹಿಂದಿನ ತಪ್ಪುಗಳು ಅಳಿಸಿಹೋಗುತ್ತವೆ.
ಒಂದು ರೂಪಾಯಿ ನಾಣ್ಯವನ್ನು ದೇವರ ಮುಂದಿಟ್ಟು ಮರುದಿನ ಅದನ್ನು ತೆಗೆದು ಪರ್ಸ್ ನಲ್ಲಿಟ್ಟುಕೊಳ್ಳಿ. ಹೀಗೆ ಮಾಡಿದಲ್ಲಿ ಆರ್ಥಿಕ ನಷ್ಟವುಂಟಾಗುವುದಿಲ್ಲ.
ಸರಗಳ್ಳತನದ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಪೂರ್ವ ವಿಭಾಗದ ಬೈಯಪ್ಪನಹಳ್ಳಿ ಖಾಕಿ ಪಡೆ ಈ ಬಗ್ಗೆ ನೂತನ ಪ್ರಯತ್ನಕ್ಕೆ ಮುಂದಾಗಿದೆ. `ಜೋಕೆ ಸರಗಳ್ಳರಿದ್ದಾರೆ ಜೋಕೆ’ ಎಂಬ ಸಾಂಗ್ ಬಿಡುಗಡೆ ಮಾಡಿದೆ.
ಈ ಹಾಡಿಗೆ ಬೈಯಪ್ಪನಹಳ್ಳಿ ಠಾಣೆಯ ಸುಬ್ರಮಣ್ಯ ಶಾನುಭೋಗ್ ಸಾಹಿತ್ಯ ನೀಡಿದ್ದು, ಕಂಠದಾನ ಮಾಡಿದ್ದಾರೆ. ಹಾಡಿಗೆ ಬಿ.ಆರ್. ಹೇಮಂತ್ ಕುಮಾರ್ ಸಂಗೀತವಿದೆ.
ಶಾನುಭೋಗ್ ತಮ್ಮ ಸಾಹಿತ್ಯದಲ್ಲಿ ಕಳ್ಳತನ ಆಗುವ ಸ್ಥಳ ಹಾಗೂ ಕಳ್ಳರು ಹೇಗೆ ತಮ್ಮ ಕೈಚಳಕ ತೋರಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಲು ಮುಂದಾಗಿದ್ದಾರೆ.
ಹಾಡಿನಲ್ಲಿ ಯಾವ ವಯಸ್ಸಿನ ಜನರನ್ನು ಸರಗಳ್ಳರು ಟಾರ್ಗೆಟ್ ಮಾಡಿರುತ್ತಾರೆ. ಹೇಗೆ ಪ್ಲಾನ್ ಮಾಡಿ ಸರ ಕಳವು ಮಾಡ್ತಾರೆ ಎಂಬುದನ್ನು ಬಿಡಿಸಿ ಹೇಳಲಾಗಿದೆ. ಅಲ್ಲದೆ ಬೆಂಗಳೂರು ಪೊಲೀಸರು ಸಾರ್ವಜನಿಕರ ಸೇವೆಗೆ ಸದಾ ಸಿದ್ಧ ಎಂದು ಈ ಹಾಡಿನಲ್ಲಿ ತೋರಿಸಲಾಗಿದೆ. ಆಗಸ್ಟ್ 15 ರಂದು ಅಪ್ ಲೋಡ್ ಆಗಿರುವ ಈ ಸಾಂಗ್ ವಿಡಿಯೋ ಈಗ ವೈರಲ್ ಆಗಿದ್ದು, ಸರಗಳ್ಳತನದ ಕುರಿತು ಅರಿವು ಮೂಡಿಸಲು ಬೆಂಗಳೂರು ಪೊಲೀಸರು ಮಾಡಿರುವ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ವಿವಿಧ ಏರ್ ಲೈನ್ಸ್ ಸಂಸ್ಥೆಗಳು ವಿಶೇಷ ವಿಮಾನವನ್ನು ಘೋಷಿಸಿವೆ. ಮಳೆಯ ರುದ್ರ ನರ್ತನಕ್ಕೆ ತತ್ತರಿಸಿರುವ ಕೇರಳ ರಾಜ್ಯದ ನೆರೆ ಪೀಡಿತ ಜನರಿಗೆ ಸಹಾಯ ಮಾಡಲು, ಈ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೆಲವು ದಿನ ಹವಾಮಾನದ ವೈಪರೀತ್ಯದಿಂದ ಹಾರಾಟ ನಡೆಸದಿದ್ದ ವಿಮಾನಗಳು ನಾಳೆಯಿಂದ ಮತ್ತೆ ಆರಂಭವಾಗಲಿವೆ.
ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ನಗರಗಳಿಂದ ಕೊಚ್ಚಿಗೆ ವಿಶೇಷ ವಿಮಾನವನ್ನು ಕಲ್ಪಿಸಲು ವಿವಿಧ ಸಂಸ್ಥೆಗಳು ಕೈ ಜೋಡಿಸಿವೆ. ಈ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ಕಟಿಬದ್ಧವಾಗಿವೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಟ್ವಿಟ್ ಮಾಡಿದ್ದಾರೆ.
ಮಳೆಯ ಆರ್ಭಟಕ್ಕೆ ಕೇರಳ ಸ್ಥಬ್ಧವಾಗಿದ್ದು, ಟ್ರೇನ್ ಟ್ರ್ಯಾಕ್ ಗಳ ಮೇಲೆ ನೀರು ನಿಂತಿರುವ ಪರಿಣಾಮ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳು ಸ್ಥಗಿತಗೊಂಡಿವೆ. ಪ್ರಮುಖವಾಗಿ ಕೊಯಮತ್ತೂರು, ಚೆನ್ನೈ, ಯಶವಂತಪುರ, ಎರ್ನಾಕುಲಂ, ಮಂಗಳೂರು ಹಾಗೂ ಬೆಂಗಳೂರಿನಿಂದ ಕೇರಳಕ್ಕೆ ಸಂಚರಿಸಬೇಕಿದ್ದ ರೈಲುಗಳು ಸ್ಥಗಿತಗೊಂಡಿವೆ. ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಹರಸಾಹಸ ಮಾಡುತ್ತಿದ್ದಾರೆಯೇ…? ಇಂತದ್ದೊಂದು ಅನುಮಾನಕ್ಕೆ ಪುಷ್ಟಿ ನೀಡುವಂತಿದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನೀಡಿರುವ ಈ ಹೇಳಿಕೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ದೆಹಲಿಗೆ ತೆರಳಿ ಏನೆಲ್ಲ ಕರಾಮತ್ತು ನಡೆಸುತ್ತಿದ್ದಾರೆಂಬುದು ಗೊತ್ತು. ಯಾವೆಲ್ಲ ಯೋಜನೆಗಳಿಗೆ ಅಡ್ದಿಪಡಿಸುತ್ತಿದ್ದಾರೆ ಎಂಬುದೂ ಗೊತ್ತು. ಆದರೆ ಏನೇ ತಂತ್ರ, ಕುತಂತ್ರ ನಡೆಸಿದರೂ ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು, ರಾಜ್ಯದ ಮೈತ್ರಿ ಸರ್ಕಾರ ಉರುಳಿಸಲು ಸದ್ದಿಲ್ಲದೆ ಕಸರತ್ತು ನಡೆಸುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಸಾಲಮನ್ನಾ ವಿಚಾರ ಪಕ್ಷದೊಳಗಿನ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಬಿಜೆಪಿಯತ್ತ ಒಲವು ಹೊಂದಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ಹೆಣೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಸಿಎಂ ನೀಡಿರುವ ಈ ಹೇಳಿಕೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಕೋಲ್ಕತ್ತಾ ನಗರದ ಸಿವಿಲ್ ನ್ಯಾಯಾಲಯ ಸುಳ್ಳು ಕೇಸು ದಾಖಲಿಸಿ ಸರ್ಕಾರಿ ಅಧಿಕಾರಿಗಳ ಸಮಯ ಹಾಳು ಮಾಡಿದ ಹಿನ್ನಲೆಯಲ್ಲಿ ಮಹಿಳೆಗೆ ಎರಡು ತಿಂಗಳ ಶಿಕ್ಷೆ ವಿಧಿಸಿದೆ.
ಎರಡು ತಿಂಗಳ ಹಿಂದೆ ಕೋಲ್ಕತ್ತಾದ ಜಿಮುತ್ ಭವಾನ್ ಬಿಸ್ವಾನ್, ತನ್ನ ಎಂಟು ವರ್ಷದ ಪುತ್ರಿಯ ಮೇಲೆ ಕ್ಷೌರಿಕನೊಬ್ಬ ಹೇರ್ ಕಟ್ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅಂತ ಪೂಲನ್ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ 40 ವರ್ಷದ ಕ್ಷೌರಿಕನನ್ನ ಪೊಲೀಸರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದರು. ಅಂದಿನಿಂದ ಕ್ಷೌರಿಕ ಪೊಲೀಸ್ ಕಸ್ಟಡಿಯಲ್ಲಿ ಇದ್ದ. ಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲಿ ಜಿಮುತ್ ಭವಾನ್ ಬಿಸ್ವಾನ್ ತಾನು ಆರೋಪಿಯ ಮೇಲೆ ಸುಳ್ಳು ದೂರು ದಾಖಲಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಪ್ರಕರಣದ ವಾದ-ವಿವಾದ ಶುರುವಾಗೋದಕ್ಕೂ ಮೊದಲೇ ಮಹಿಳೆ ತಾನು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸೂಕ್ತ ಕಾರಣವನ್ನೂ ಮಹಿಳೆ ನೀಡಿಲ್ಲ. ಹಾಗಾಗಿ ನ್ಯಾಯಾಧೀಶರು ಪ್ರಕರಣವನ್ನು ವಜಾಗೊಳಿಸಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಂಡ ಅಪರಾಧಕ್ಕೆ ಮಹಿಳೆಗೆ ಎರಡು ತಿಂಗಳ ಸಜೆ ವಿಧಿಸಿದ್ದಾರೆ.