![bomb blast]()
![bomb blast]()
ಆಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದ ಜಲಾಲಬಾದ್ ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ.
ಆಫ್ಘಾನಿಸ್ತಾನದಲ್ಲಿ ಕಳೆದೆರಡು ತಿಂಗಳಿಂದ ಪದೇ ಪದೇ ಬಾಂಬ್ ದಾಳಿ ನಡೆಯುತ್ತಿದ್ದು, ನಾಗರೀಕರು ನಲುಗಿ ಹೋಗಿದ್ದಾರೆ. ಜಲಾಲಬಾದ್ ನಲ್ಲಿ ಅಧಿಕಾರಿಗಳು ಹಾಗೂ ಪ್ರಮುಖರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ತಾಲಿಬಾನ್ ಉಗ್ರರಿಂದ ಬಂಧಿತನಾಗಿದ್ದ ಯುವಕನೊಬ್ಬ ಬಂದಿದ್ದ ಕಾರಣ ಜನರೆಲ್ಲಾ ಅಧಿಕಾರಿಗಳ ನಿವಾಸಗಳ ಸಮೀಪ ಗುಂಪುಗೂಡಿದ್ದರು ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನನ್ನೇ ಸ್ಪೋಟಿಸಿಕೊಂಡಿದ್ದು, ಬಾಂಬ್ ದಾಳಿಗೆ ಸ್ಥಳದಲ್ಲೇ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಹೊಣೆಯನ್ನು ಯಾವ ಉಗ್ರವಾದಿ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದು ಹೇಳಲಾಗಿದ್ದು, ಕಳೆದ ವಾರ ಜಲಾಲಬಾದ್ ನಲ್ಲಿರುವ ಪಾಕಿಸ್ತಾನ ದೂತವಾಸ ಕಚೇರಿ ಬಳಿ ನಡೆದ ಬಾಂಬ್ ದಾಳಿಯನ್ನು ಐಸಿಸ್ ಉಗ್ರರು ನಡೆಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿರಂತರ ಬಾಂಬ್ ದಾಳಿಯಿಂದ ಅಫ್ಘಾನಿಸ್ತಾನದಲ್ಲಿ ಜನ ಭಯದಲ್ಲಿಯೇ ಜೀವನ ನಡೆಸುವಂತಾಗಿದೆ.