

ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಖಾಸಗಿ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ 25 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ವೈದ್ಯರ ಮುಷ್ಕರದ ವಿಚಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ವಿಧಾನಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಸದನದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಸರ್ಕಾರದ ಬೇಜವಾಬ್ದಾರಿತನದಿಂದಾಗಿ 25 ಮಂದಿ ಅಮಾಯಕರ ಕೊಲೆಯಾಗಿದೆ. ವಿಚಾರವನ್ನು ಪ್ರತಿಷ್ಟೆಯಾಗಿ ಪರಿಗಣಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯರು ಮುಷ್ಕರ ಮುಂದುವರೆಸಲು ವಿರೋಧ ಪಕ್ಷಗಳ ಕುಮ್ಮಕ್ಕೇ ಕಾರಣ. ರಾಜಕೀಯ ಕಾರಣಗಳಿಗಾಗಿ ಮುಷ್ಕರ ಮಾಡುವಂತೆ ವೈದ್ಯರನ್ನು ಬಿಜೆಪಿಯವರು ಎತ್ತಿ ಕಟ್ಟಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ.