

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಗೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ.
ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಖಾಸಗಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಿರತವಾಗಿರುವ ಹಿನ್ನೆಲೆಯಲ್ಲಿ ಮಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳು ಬಂದ್ ಆಗಿವೆ.
ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆ ರೋಗಿಗಳಿಗೆ ದೊರಕದ ಹಿನ್ನೆಲೆಯಲ್ಲಿ ಆರೋಗ್ಯ ಸೇವೆ ವ್ಯತ್ಯಯವಾಗಿದೆ. ರೋಗಿಗಳು ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕು ಆಸ್ಪತ್ರೆ ಹಾಗೂ ಇನ್ನಿತರೆ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ಜಿಲ್ಲಾಸ್ಪತ್ರೆಗಳು ಸೇರಿದಂತೆ ಇನ್ನಿತರೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿಗಿಂತ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ತುರ್ತು ಚಿಕಿತ್ಸೆಯಲ್ಲಿ ತೊಂದರೆ ಉಂಟಾಗಿದ್ದು, ರೋಗಿಗಳ ಪಾಡು ಹೇಳತೀರದಂತಾಗಿದೆ. ಅದರಲ್ಲೂ ಹೃದಯ ಸಂಬಂಧಿ ಚಿಕಿತ್ಸೆ ಹಾಗೂ ಮಕ್ಕಳು ಹಾಗೂ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದೆ.
ಇಂದು ಬೆಳಿಗ್ಗೆಯಿಂದ ಹೊರ ರೋಗಿಗಳ ವಿಭಾಗವನ್ನು ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದ ಪರಿಣಾಮ ಮಾಹಿತಿ ಇಲ್ಲದೇ ದೂರದೂರುಗಳಿಂದ ಚಿಕಿತ್ಸೆಗೆಂದು ಬಂದ ರೋಗಿಗಳ ಪಾಡು ಹೇಳತೀರದಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಒಳ ರೋಗಿಗಳಾಗಿ ದಾಖಲಾಗಿರುವವರಿಗೆ ಚಿಕಿತ್ಸೆ ದೊರಕುತ್ತಿದೆ. ಹೊರ ರೋಗಿಗಳಿಗೆ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಸೇವೆ ಲಭ್ಯವಿಲ್ಲದಂತಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ದನೆಯ ಸರತಿ ಸಾಲು ಕಂಡುಬಂದಿದೆ.
ಸರ್ಕಾರ ಹಾಗೂ ಖಾಸಗಿ ವೈದ್ಯರುಗಳ ನಡುವಿನ ಹಗ್ಗಜಗ್ಗಾಟ ಮುಂದುವರೆದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರಕದೇ ರೋಗಿಗಳು ಇನ್ನಷ್ಟು ಸಂಕಷ್ಟಕ್ಕೆ ಈಡಾಗುತ್ತಾರೆ. ಜೊತೆಗೆ ತುರ್ತು ಪರಿಸ್ಥಿತಿ ನಿರ್ಮಾಣಗೊಂಡರೂ ಆಶ್ಚರ್ಯಪಡಬೇಕಿಲ್ಲ.