

ಆಧಾರ್ ಆಧಾರಿತ ಸಿಬ್ ರಿ ವೆರಿಫಿಕೇಶನ್ ಗೆ ಟೆಲಿಕಾಂ ಆಪರೇಟರ್ ಗಳು ಪ್ರಸ್ತಾಪಿಸಿದ 3 ವಿಧಾನಗಳಿಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸಮ್ಮತಿ ನೀಡಿದೆ. ಡಿಸೆಂಬರ್ 1ರಿಂದ ಈ ಹೊಸ ವಿಧಾನಗಳ ಮೂಲಕ ಆಧಾರ್ ಮೂಲಕ ಮೊಬೈಲ್ ಚಂದಾದಾರರ ಸಿಮ್ ಪರಿಶೀಲನೆ ಮಾಡಬಹುದು.
ನಿಮ್ಮ ಮನೆಯಲ್ಲೇ ಕುಳಿತು ಆರಾಮಾಗಿ ಸಿಮ್ ರಿ ವೆರಿಫೈ ಮಾಡುವಂತ ಹೊಸ ವಿಧಾನಗಳಿವು. ಓಟಿಪಿ, ಆ್ಯಪ್ ಅಥವಾ IVRS ಮೂಲಕ ರಿ ವೆರಿಫಿಕೇಶನ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಇದಕ್ಕಾಗಿ ನೀವು ಟೆಲಿಕಾಂ ಕಂಪನಿಗಳ ಮಳಿಗೆಗಳಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.
ಅನಾರೋಗ್ಯ ಪೀಡಿತರು, ವೃದ್ಧರು ಮತ್ತು ವಿಕಲ ಚೇತನರ ಮನೆ ಬಾಗಿಲಿಗೇ ಬಂದು ಟೆಲಿಕಾಂ ಆಪರೇಟರ್ ಗಳು ಸಿಮ್ ವೆರಿಫೈ ಮಾಡಿಕೊಡಲಿದ್ದಾರೆ. ಇದಕ್ಕೆ ನೀವು ಆನ್ ಲೈನ್ ನಲ್ಲಿ ರಿಕ್ವೆಸ್ಟ್ ಸಲ್ಲಿಸಬೇಕಷ್ಟೆ. ಈ ತಿಂಗಳಾಂತ್ಯದೊಳಗೆ ಓಟಿಪಿ ಆಧಾರಿತ ವೆರಿಫಿಕೇಶನ್ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲಾಗುತ್ತದೆ.