![viratnm]()
![viratnm]()
ಮೆಲ್ಬರ್ನ್: ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಸರಣಿಯ ಕನಸು ಭಗ್ನವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತಕ್ಕೆ ಮೂರನೇ ಪಂದ್ಯದಲ್ಲಿಯೂ ಆಸೀಸ್ ಗೆಲುವಿನ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಮೂರನೇ ಪಂದ್ಯದಲ್ಲಿಯೂ ಭಾರತಕ್ಕೆ ಬೌಲರ್ ಗಳ ವೈಫಲ್ಯ ತೀವ್ರವಾಗಿ ಕಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ವಿರಾಟ್ ಕೊಹ್ಲಿ (117 ರನ್) ಸಿಡಿಸಿದ ಶತಕದ ನೆರವಿನಿಂದ 50 ಓವರ್ ಗಳಲ್ಲಿ 295 ರನ್ ಗಳಿಸಿತು. ಭಾರತದ ಪರವಾಗಿ ಶಿಖರ್ ಧವನ್ 68, ಅಜಿಂಕ್ಯ ರೆಹಾನೆ 50 ರನ್ ಗಳಿಸಿದರು. 296 ರನ್ ಗೆಲುವಿನ ಗುರಿ ಬೆನ್ನತ್ತಿದ ಆಸೀಸ್ 48.5 ಓವರ್ ಗಳಲ್ಲಿ 296 ರನ್ ಗಳಿಸಿತು. ಆಸೀಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮ್ಯಾಕ್ಸ್ ವೆಲ್ 96 ಹಾಗೂ ಮಾರ್ಷ್ 62 ರನ್ ಗಳಿಸಿದರು.
ಭಾರತದ ಪರ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನು ಬರೆದರು. ಅತಿ ವೇಗವಾಗಿ 7 ಸಾವಿರ ರನ್ ಗಳಿಸಿದ ದಾಖಲೆ ಮಾಡಿದ್ದ ಎ. ಬಿ. ಡಿವಿಲಿಯರ್ಸ್ ಹೆಸರಿನಲ್ಲಿದ್ದು, ಅದನ್ನು ವಿರಾಟ್ ಕೊಹ್ಲಿ ಮುರಿದರು. ಪರ್ತ್ ಮತ್ತು ಬ್ರಿಸ್ಬೇನ್ ನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಮೆಲ್ಬರ್ನ್ ಪಂದ್ಯದಲ್ಲಿಯೂ ಸೋತು ಸರಣಿಯ ಕನಸು ಭಗ್ನವಾಗಿದೆ.