![burnt-fire-suicide-ablaze]()
![burnt-fire-suicide-ablaze]()
ಒಂದೆಡೆ ಹೆಣ್ಣು ಮಕ್ಕಳು ಸಶಕ್ತರಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ನಡುವೆಯೇ ಪತಿ ಮಹಾಶಯನೊಬ್ಬ ತವರಿನಿಂದ ವರದಕ್ಷಿಣೆ ತರದ ಪತ್ನಿಯನ್ನು ಮಗು ಸಮೇತವಾಗಿ ಜೀವಂತ ದಹನ ಮಾಡಿದ ಆಘಾತಕಾರಿ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.
ಹೌದು. ಇಲ್ಲಿನ ಕೇಂದ್ರಾಪರ ಜಿಲ್ಲೆಯ ಕೊರಾಂಡಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ವರ್ಷಗಳ ಹಿಂದೆ 32 ವರ್ಷದ ಬಿಕ್ರಂ ಸಾಹೂ ಎಂಬಾತನೊಂದಿಗೆ 29 ವರ್ಷದ ಸುರೇಖಾಳ ವಿವಾಹವಾಗಿತ್ತು. ಅಲ್ಲದೇ ಈ ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗುವಿತ್ತು. ಆದರೆ, ಬಿಕ್ರಂ ಪ್ರತಿನಿತ್ಯ ವರದಕ್ಷಿಣೆಗಾಗಿ ಪೀಡಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಹಲವಾರು ಬಾರಿ ಈ ಕುರಿತಾಗಿ ಹಿರಿಯರು ಬುದ್ದಿ ಮಾತನ್ನೂ ಹೇಳಿದ್ದರು.
ಆದರೆ ತನ್ನ ಚಾಳಿ ಮುಂದುವರೆಸಿದ್ದ ಬಿಕ್ರಂ ಸಾಹೂ ಮತ್ತೆ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ. ಆದರೆ ಆಕೆ ತನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ಸಾಹು ಆಕೆಯನ್ನು ಹಾಗೂ ಎರಡು ವರ್ಷದ ಮಗಳು ಸ್ನೇಹಾಂಜಲಿಯನ್ನು ಬಾತ್ ರೂಮ್ ನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಈ ಕುರಿತಾಗಿ ಸ್ಥಳೀಯರು ಸುರೇಖಾ ತಂದೆ ಹರೀಶ್ಚಂದ್ರ ಬೆಹ್ರಾ ಅವರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಹರೀಶ್ಚಂದ್ರ ರಾಜ್ ಕನಿಕಾ ಪೊಲೀಸ್ ಠಾಣೆಯಲ್ಲಿ ಬಿಕ್ರಂ ಸಾಹೂ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಕ್ರಂ ಮತ್ತು ಆತನ ತಂದೆ ಬೃಂದಾಬನ್ ಸಾಹೂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.