![kabir-bedi-7591]()
![kabir-bedi-7591]()
ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಅಭಿನಯಿಸಿರುವ ಖ್ಯಾತ ನಟ ಕಬೀರ್ ಬೇಡಿ ತಮ್ಮ 70 ನೇ ಹುಟ್ಟು ಹಬ್ಬದಂದು ತಮ್ಮ ಬಹು ಕಾಲದ ಗೆಳತಿ 42 ವರ್ಷದ ಪರ್ವೀನ್ ದೂಸಾಂಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶನಿವಾರದಂದು ಮುಂಬೈನ ಅಲಿಭಾಗ್ ಎಸ್ಟೇಟ್ ನಲ್ಲಿ ಕಬೀರ್ ಬೇಡಿ ತಮ್ಮ 70 ನೇ ಹುಟ್ಟು ಹಬ್ಬದ ಪಾರ್ಟಿ ಏರ್ಪಡಿಸಿದ್ದರು. ಆಹ್ವಾನಿತರಿಗೆ ಕಬೀರ್ ಬೇಡಿ ವಿವಾಹದ ಯಾವುದೇ ಮಾಹಿತಿಯಿರಲಿಲ್ಲ. ಹುಟ್ಟು ಹಬ್ಬಕ್ಕೆಂದು ತೆರಳಿದವರು ಕಬೀರ್ ಬೇಡಿ ಹಾಗೂ ಪರ್ವೀನ್ ಅವರ ವಿವಾಹಕ್ಕೂ ಸಾಕ್ಷಿಯಾದರು.
ಗುರುವಾರದಂದು ಕಬೀರ್ ಬೇಡಿ ಹಾಗೂ ಪರ್ವೀನ್ ಗುರುದ್ವಾರಕ್ಕೆ ತೆರಳಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಶುಕ್ರವಾರ ಇವರಿಬ್ಬರು ವಿವಾಹವಾಗಿದ್ದರೂ ಹುಟ್ಟು ಹಬ್ಬಕ್ಕೆ ಆಗಮಿಸಿದ ಅತಿಥಿಗಳ ಮುಂದೆ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡಿದ್ದಾರೆ. ಕಬೀರ್ ಬೇಡಿ ಈ ಹಿಂದೆ ಪ್ರೊತಿಮಾ ಬೇಡಿ, ಸೂಸಾನ್ ಹಾಗೂ ನಿಕ್ಕಿ ಬೇಡಿ ಎಂಬವರೊಂದಿಗೆ ವಿವಾಹವಾಗಿದ್ದರು. ಕೆಲ ವರ್ಷಗಳಿಂದ ಪರ್ವೀನ್ ಜೊತೆ ಕಬೀರ್ ಬೇಡಿ ಸಹ ಜೀವನ ನಡೆಸುತ್ತಿದ್ದರು.
ಕಬೀರ್ ಬೇಡಿ ಹುಟ್ಟು ಹಬ್ಬ ಕಮ್ ವಿವಾಹ ಸಮಾರಂಭದಲ್ಲಿ ಹಲವು ಬಾಲಿವುಡ್ ಗಣ್ಯರು ಪಾಲ್ಗೊಂಡಿದ್ದು, ಕಬೀರ್ ಬೇಡಿ ಪುತ್ರಿ ಪೂಜಾ ಬೇಡಿ ಮಾತ್ರ ಈ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ. ಪೂಜಾ ಬೇಡಿ ಸಹೋದರ ಆಡಂ ತಂದೆಯ ವಿವಾಹಕ್ಕೆ ಸಾಕ್ಷಿಯಾಗಿದ್ದರೆಂದು ಹೇಳಲಾಗಿದೆ.