![gold baba n]()
![gold baba n]()
ಬಂಗಾರ ಎಂದರೆ ಯಾರಿಗೆ ತಾನೇ ಬೇಡ ಹೇಳಿ, ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ ಇರುತ್ತದೆ. ಆದರೆ, ಇಲ್ಲೊಬ್ಬ ಬಾಬಾ ಸದಾಕಾಲ 15 ಕೆಜಿ ಬಂಗಾರವನ್ನು ಮೈಮೇಲೆ ಹೊತ್ತುಕೊಂಡೇ ತಿರುಗಾಡುತ್ತಾರೆ. ಇವರನ್ನು ನೋಡಿದವರೆಲ್ಲಾ ಬಂಗಾರದ ಮನುಷ್ಯ ಎಂದೇ ಕರೆಯುತ್ತಾರೆ. ಅಷ್ಟಕ್ಕೂ ಈ ಬಾಬಾ ಯಾರೆಂದು ತಿಳಿಯಲು ಮುಂದೆ ಓದಿ.
ಹರಿದ್ವಾರದ ಗಂಗಾ ನದಿಯಲ್ಲಿ ನಡೆಯುವ ಪವಿತ್ರ ಅರ್ಧ ಕುಂಭಮೇಳದಲ್ಲಿ ಈ ಬಂಗಾರದ ಬಾಬಾ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ನಾಗಾ ಸಾಧುಗಳು, ಅಖಾರಿ ಬಾಬಾಗಳು ಈ ಅರ್ಧ ಕುಂಭಮೇಳದಲ್ಲಿ ಭಾಗವಹಿಸಿದ್ದು, ಅವರಲ್ಲಿ ಈ ಗೋಲ್ಡನ್ ಬಾಬಾ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಕತ್ತಿನ ತುಂಬ ಬಂಗಾರದ ಸರ, ಎರಡೂ ಕೈಗಳಲ್ಲಿ ದೊಡ್ಡದಾದ ಕೈಗಡಗ, ಬೆರಳಿಗೆ ದೊಡ್ಡ ಉಂಗುರಗಳು, ಇವುಗಳ ಜೊತೆಗೆ 27 ಲಕ್ಷ ರೂಪಾಯಿ ಬೆಲೆಬಾಳುವ ವಾಚ್ ತೊಟ್ಟಿದ್ದಾರೆ. ಇವರ ಮೈಮೇಲೆ ಬರೋಬ್ಬರಿ 15 ಕೆಜಿ ಬಂಗಾರ ಸದಾ ಕಾಲ ಇರುತ್ತದೆ ಎಂದು ಹೇಳಲಾಗಿದೆ.
ನವದೆಹಲಿಯಲ್ಲಿ ಚಿನ್ನದ ವ್ಯಾಪಾರಿಯಾಗಿದ್ದ ಸುಧೀರ್ ಕುಮಾರ್ ಬಾಬಾ ಆದ ನಂತರ ಮೈಮೇಲೆಯೇ ಕೆಜಿಗಟ್ಟಲೆ ಬಂಗಾರ ಹಾಕಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಇವುಗಳ ರಕ್ಷಣೆಗಾಗಿ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಸೇವಾ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಬಾಬಾ ಹರಿದ್ವಾರದಲ್ಲಿ ಸದ್ಯ ಗೋಲ್ಡನ್ ಬಾಬಾ ಎಂದೇ ಪ್ರಸಿದ್ಧರಾಗಿದ್ದಾರೆ.