![b84c8cf7-234c-4389-b25a-5b52870acca9-2060x1236]()
![b84c8cf7-234c-4389-b25a-5b52870acca9-2060x1236]()
ಪ್ರಪಂಚವನ್ನು ಪೋಲಿಯೋ ಮುಕ್ತವಾಗಿಸಲು ಏನೆಲ್ಲಾ ಪ್ರಯತ್ನಗಳು ನಡೆದಿವೆ. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿ ಘೋಷಣೆಯಾಗಿದ್ದರೂ, ಇನ್ನೂ ಕೆಲವು ದೇಶಗಳಲ್ಲಿ ಇರುವ ವೈರಸ್ ಹರಡಬಹುದೆಂಬ ಕಾರಣದಿಂದ ದೇಶಾದ್ಯಂತ ಒಂದೇ ದಿನ ಬೃಹತ್ ಆಂದೋಲನ ಮೂಲಕ ಪೋಲಿಯೋ ಲಸಿಕೆ ಹಾಕಲಾಗುತ್ತದೆ.
ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಚುನಾವಣೆಯನ್ನು ಕೂಡ ಒಂದೇ ದಿನ ಮಾಡುವುದಿಲ್ಲ. ಆದರೆ, ಪಲ್ಸ್ ಪೋಲಿಯೋ ಅಭಿಯಾನ ದೇಶಾದ್ಯಂತ ಒಂದೇ ದಿನ ನಡೆಯುತ್ತದೆ. ಇಂತಹ ಮಹತ್ವಾಕಾಂಕ್ಷಿಯ ಕಾರ್ಯಕ್ರಮ ಕಳೆದ ಭಾನುವಾರ ದೇಶಾದ್ಯಂತ ನಡೆಯಿತು. ಜಮ್ಮು ಕಾಶ್ಮೀರದಲ್ಲಿ ಪಲ್ಸ್ ಪೋಲಿಯೋ ಹಾಕಿದ ಮಗುವೊಂದು ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪೋಲಿಯೋ ಹನಿ ಹಾಕಿದ ನಂತರ ಮಗು ಮೃತಪಟ್ಟಿದೆ ಎಂದು ಈ ಯುವಕ ಅಪಪ್ರಚಾರ ಮಾಡಿದ್ದ.
ಶ್ರೀನಗರದ ಕಾಲೇಜ್ ಒಂದರ ವಿದ್ಯಾರ್ಥಿಯಾಗಿರುವ ಈತ ಫೇಸ್ ಬುಕ್ ನಲ್ಲಿ ಮಗು ಸಾವನ್ನಪ್ಪಿದೆ ಎಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಶ್ರೀನಗರ ಪೊಲೀಸರು ತನಿಖೆ ಕೈಗೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಆತಂಕಕ್ಕೆ ಕಾರಣವಾದ ಯುವಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.